Friday, July 24, 2026
Join WhatsApp Group
HomeLocal Newsಕಾಗೇರಿ ಜನ್ಮದಿನಕ್ಕೆ ಆರೋಗ್ಯ ಸೇವೆಯ ಕಾಣಿಕೆ

ಕಾಗೇರಿ ಜನ್ಮದಿನಕ್ಕೆ ಆರೋಗ್ಯ ಸೇವೆಯ ಕಾಣಿಕೆ

ಸಂಸದ ಕಾಗೇರಿ ಜನ್ಮದಿನೋತ್ಸವದ ನಿಮಿತ್ತ ಹಾರ್ಸಿಕಟ್ಟಾದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ

ಸಿದ್ದಾಪುರ: ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕರಾಗಿದ್ದಾಗ ಹಾಗೂ ಈಗ ಸಂಸದರಾಗಿದ್ದಾಗ ಕ್ಷೇತ್ರದಲ್ಲಿ ಆರೋಗ್ಯ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ಸಂಸದ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್, ಶಿರಸಿ-ಸಿದ್ದಾಪುರ ಕಾಗೇರಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಸಿದ್ದಾಪುರ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.

ವಿಶೇಷವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 142 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ, ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳು ಲಭ್ಯವಾಗುವಂತೆ ಮಾಡಿದ್ದಾರೆ. ಅಂತಹ ಜನನಾಯಕರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಈ ಆರೋಗ್ಯ ಶಿಬಿರ ಗ್ರಾಮೀಣ ಜನಸಾಮಾನ್ಯರಿಗೆ ಉಪಯುಕ್ತವಾದರೆ ಮಾತ್ರ ತಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ, ಆರೋಗ್ಯವೇ ನಿಜವಾದ ಸಂಪತ್ತು. ಗ್ರಾಮೀಣ ಜನರು ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ನರೇಂದ್ರ ಹೆಗಡೆ ಹೊಡಗಾಶಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕರು, ಸಚಿವರು ಹಾಗೂ ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ಅನಂತಮೂರ್ತಿ ಹೆಗಡೆ ಅವರ ಸಾಮಾಜಿಕ ಕಳಕಳಿಯಿಂದ ಇಂತಹ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಶಿಬಿರದಲ್ಲಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಗಳ ತಜ್ಞ ವೈದ್ಯರು ವಿವಿಧ ವಿಭಾಗಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಚಿಕಿತ್ಸೆ ನೀಡಿದರು. ಜನರಲ್ ಮೆಡಿಸಿನ್, ಯೂರಾಲಜಿ, ಸ್ತ್ರೀರೋಗ, ಮಕ್ಕಳ ರೋಗ, ಚರ್ಮರೋಗ, ನೇತ್ರ ಹಾಗೂ ಕ್ಯಾನ್ಸರ್ ತಪಾಸಣೆ ಸೇರಿದಂತೆ ವಿವಿಧ ಸೇವೆಗಳು ಉಚಿತವಾಗಿ ಲಭ್ಯವಿದ್ದವು.

ಇದೇ ವೇಳೆ ಎಂ.ಎಂ. ಜೋಶಿ ಗಣೇಶ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣೆ, ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ನಡೆಸಲಾಯಿತು. ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.

ಶಿಬಿರದ ಅಂಗವಾಗಿ ಪಿ.ಜಿ. ಆಸ್ಪತ್ರೆಯ ಬ್ಲಡ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಬಿಜೆಪಿ ಪದಾಧಿಕಾರಿಗಳು, ಕಾಗೇರಿ ಅಭಿಮಾನಿಗಳು, ಸಮಾಜದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share