ಕಾರವಾರ: ಹೊನ್ನಾವರ ತಾಲೂಕಿನ ಹಳದಿಪುರದ ಶ್ರೀ ಕೃಷ್ಣಾಶ್ರಮ ಮಠದಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿಗಳ ವಿರುದ್ಧ ಪ್ರಶ್ನೆ ಎತ್ತಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡದ ನಿವಾಸಿ, ಚಾಲಕರಾದ ಅಜೀತ್ ರಾಮ ಪೋಕಳೆ (60) ಅವರು ನೀಡಿದ ದೂರಿನ ಮೇರೆಗೆ, 8 ರಿಂದ 10 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಹಳದಿಪುರದ ಶ್ರೀ ಕೃಷ್ಣಾಶ್ರಮ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿ ಅವರ ವಿರುದ್ಧ ಮಠದ ಆಸ್ತಿ ಹಾಗೂ ಹಣಕಾಸು ನಿರ್ವಹಣೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪಗಳ ಕುರಿತು ಚರ್ಚಿಸಲು ಜುಲೈ 5ರಂದು ಬೆಳಿಗ್ಗೆ 11 ಗಂಟೆಗೆ ವೈಶ್ಯ ಸಮಾಜದ ಕೃಷ್ಣಾಶ್ರಮ ಮಠದಲ್ಲಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಉಡುಪಿ ಮೂಲದ ಮಿಥುನ್ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಿದ್ದ ವೇಳೆ, ಅಜೀತ್ ಪೋಕಳೆ ಅವರು ಮೈಕ್ ಪಡೆದು ಸ್ವಾಮೀಜಿಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಪೊಲೀಸರಿಗೆ ದೂರು ನೀಡಿಲ್ಲ ಏಕೆ ಎಂದು ಸಭೆಯ ಪ್ರಮುಖರನ್ನು ಪ್ರಶ್ನಿಸಿದ್ದಾರೆ.
ಇದಾದ ಬಳಿಕ ವೇದಿಕೆಯಿಂದ ಕೆಳಗಿಳಿದ ವೇಳೆ ಅಲ್ಲಿದ್ದ ಸುಮಾರು 8ರಿಂದ 10 ಮಂದಿ ಅಪರಿಚಿತ ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಗಡ್ಡ ಹಾಗೂ ತಲೆಕೂದಲು ಎಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು, “ಸ್ವಾಮೀಜಿಯವರ ವಿರುದ್ಧ ಮಾತನಾಡಿದರೆ ಜೀವಂತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.