Friday, July 24, 2026
Join WhatsApp Group
HomeLocal Newsಆರ್.ಟಿ.ಓ. ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕೆಲಸವಿಲ್ಲ!

ಆರ್.ಟಿ.ಓ. ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಕೆಲಸವಿಲ್ಲ!

ದಾಂಡೇಲಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

 

ದಾಂಡೇಲಿ: ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಆರ್.ಟಿ.ಓ ಮತ್ತು ಎ.ಆರ್.ಟಿ.ಓಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಅವರು ಶುಕ್ರವಾರ ದಾಂಡೇಲಿಯಲ್ಲಿ 6.55 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಪ್ರಾದೇಶಿಕ ಕಚೇರಿಗಳಲ್ಲಿನ ಬಹುತೇಕ ಸಾರ್ವಜನಿಕ ಸೇವೆಗಳನ್ನು ಆನ್‌ಲ್ಯೆನ್ ವ್ಯವಸ್ಥೆಗೊಳಿಸಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರಿಗೆ ಇಲಾಖೆಯಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದ್ದು, ರಾಜ್ಯದ ಮತ್ತು ಬೇರೆ ರಾಜ್ಯಗಳ ವಾಹನಗಳು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಂದರೆ ಮಾತ್ರವೇ ವಾಹನಗಳ ಫಿಟ್‌ನೆಸ್ ಆಗಲು ಜಿಯೋ ಫೆನಸಿಂಗ್ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಅರ್ಧದಷ್ಟು ವಾಣಿಜ್ಯ ವಾಹನಗಳ ಲೋಕೇಶನ್ ಟ್ರ್ಯಾಕಿಂಗ್ ಮಾಡಲಾಗಿದ್ದು, ಉಳಿದ ವಾಹನಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ ನಡೆದ ಸ್ಲೀಪರ್ ಬಸ್ ದುರಂತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿದ್ದು, ಖಾಸಗಿ ಬಸ್‌ಗಳ ಮಾಲೀಕರಿಗೆ ಈ ತಿಂಗಳದ ಅಂತ್ಯದೊಳಗೆ ಸರ್ಕಾರ ಸೂಚಿಸಿರುವ ನಿಯಮಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸ್ಲೀಪರ್ ಬಸ್ ಗಳನ್ನು ಓಡಿಸಲು ಅನುಮತಿ ನೀಡಲಾಗುವುದು ಎಂದರು.

 ದಾಂಡೇಲಿಯಲ್ಲಿ ದೇಶಪಾಂಡೆ ಅವರ ಪ್ರಯತ್ನದಿಂದಾಗಿ ಉತ್ತಮವಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಜೊತೆಗೆ ಸ್ವಯಂ ಚಾಲಿತ ಚಾಲನ ಪರೀಕ್ಷಾ ಪಥವನ್ನು ನಿರ್ಮಿಸಲಾಗಿದೆ.

 ಇದರಿಂದಾಗಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ದೇಶ-ವಿದೇಶದಿಂದ ಪ್ರವಾಸಿಗರು ದಾಂಡೇಲಿಗೆ ಆಗಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ದಾಂಡೇಲಿ ನಗರವನ್ನು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು.

 ದಾಂಡೇಲಿಯಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಕನಸಾಗಿದೆ ಹಾಗೂ ದಾಂಡೇಲಿಯಿಂದ ಬೆಂಗಳೂರಿಗೆ ಸುಸಜ್ಜಿತ ಬಸ್ ಸಂಚಾರ ಆರಂಭವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ, ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ವಿವೇಕ್ ಬನ್ನೇ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ದಾಂಡೇಲಿಯ ಎ.ಆರ್.ಟಿ.ಓ ಅವಿನಾಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share