ಕಾರವಾರ: ಉತ್ತರ ಕನ್ನಡದ ಕಾರವಾರ ವೈದ್ಯಕೀಯ ಕಾಲೇಜಿಗೆ ಮಾಜಿ ಮುಖ್ಯಮಂತ್ರಿ, ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು. ಹೆಗಡೆಯವರ ಸ್ಮರಣೆಯನ್ನು ಶಾಶ್ವತವಾಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ರಾಮಕೃಷ್ಣ ಹೆಗಡೆಯವರ ಜನ್ಮಶತಾಬ್ದಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾರವಾರ ವೈದ್ಯಕೀಯ ಕಾಲೇಜಿನ ಜೊತೆಗೆ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೂ ಹೆಗಡೆಯವರ ಹೆಸರಿಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣಾಡಳಿತ ಕ್ಷೇತ್ರಕ್ಕೆ ರಾಮಕೃಷ್ಣ ಹೆಗಡೆಯವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, ಪ್ರತಿ ವರ್ಷ ಹೆಗಡೆಯವರ ಜನ್ಮದಿನದಂದು ಅತ್ಯುತ್ತಮ ಸಾಧನೆ ಮಾಡುವ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಅತ್ಯುತ್ತಮ ಪಂಚಾಯಿತಿ ಪ್ರಶಸ್ತಿ’ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಚರ್ಚಿಸಿ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಹೆಗಡೆಯವರು ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಗಗಳು ದೇಶಕ್ಕೇ ಮಾದರಿಯಾದವು. ಹೆಗಡೆಯವರು ಕೇವಲ ಅಧಿಕಾರ ನಡೆಸಿದ ನಾಯಕರಲ್ಲ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಹೊಸ ನಾಯಕತ್ವವನ್ನು ಕಟ್ಟಿದವರು ಎಂದು ಬಣ್ಣಿಸಿದರು. ನಾಯಕನ ಕೆಲಸ ಕೇವಲ ಅನುಯಾಯಿಗಳನ್ನು ಸೃಷ್ಟಿಸುವುದಲ್ಲ, ಮತ್ತಷ್ಟು ನಾಯಕರನ್ನು ಬೆಳೆಸುವುದು. ಈ ಗುಣ ಹೆಗಡೆಯವರ ರಾಜಕೀಯ ಬದುಕಿನ ಪ್ರಮುಖ ವೈಶಿಷ್ಟ್ಯವಾಗಿತ್ತು ಎಂದರು.
ಹೆಗಡೆಯವರ ರಾಜಕೀಯ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್ ಸೇರಿದಂತೆ ಹಲವು ನಾಯಕರು ಇಂದು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತರಾಗದೆ ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಗಡೆಯವರು ಒತ್ತು ನೀಡಿದ್ದರು ಎಂದರು.
ರಾಮಕೃಷ್ಣ ಹೆಗಡೆಯವರಿಗೆ ದೇಶದ ಪ್ರಧಾನಿಯಾಗುವ ಅರ್ಹತೆ ಮತ್ತು ಅವಕಾಶ ಎರಡೂ ಇದ್ದವು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಮಾತನ್ನು ಉಲ್ಲೇಖಿಸಿದ ಅವರು, ಹೆಗಡೆಯವರಲ್ಲಿ ಶ್ರೀರಾಮನ ಆದರ್ಶ ಮತ್ತು ಶ್ರೀಕೃಷ್ಣನ ಮುತ್ಸದ್ದಿತನ ಎರಡೂ ಇತ್ತು ಎಂದು ಸ್ಮರಿಸಿದರು.
ಹೆಗಡೆಯವರ ಜನ್ಮಶತಾಬ್ದಿ ಆಚರಣೆಯ ಸಂದರ್ಭದಲ್ಲಿ ಅವರ ಹೆಸರನ್ನು ಕಾರವಾರ ವೈದ್ಯಕೀಯ ಕಾಲೇಜಿಗೆ ನಾಮಕರಣ ಮಾಡುವ ಘೋಷಣೆ ಉತ್ತರ ಕನ್ನಡದ ಮಟ್ಟಿಗೆ ವಿಶೇಷ ಮಹತ್ವ ಪಡೆದಿದೆ. ಜಿಲ್ಲೆಯ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದಕ್ಕೆ ರಾಜ್ಯದ ಪ್ರಮುಖ ರಾಜಕೀಯ ನಾಯಕರೊಬ್ಬರ ಹೆಸರು ಬರಲಿರುವುದು, ಹೆಗಡೆಯವರಿಗೂ ಉತ್ತರ ಕನ್ನಡಕ್ಕೂ ಇದ್ದ ನಂಟನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.