ಕುಮಟಾ: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ತಂತಿ ಬೇಲಿ ಧ್ವಂಸಗೊಳಿಸಿ, ತೆಂಗು-ಅಡಿಕೆ ಗಿಡಗಳ ಮೇಲೆ ಲಾರಿ ಚಲಾಯಿಸಿ ಹಾನಿ ಉಂಟುಪಡಿಸಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಮಟಾ ತಾಲೂಕಿನ ಹುಬ್ಬಣಗೇರಿ ಗ್ರಾಮದ ನಿವಾಸಿ ಮಂಜುನಾಥ ದೇವಪ್ಪ ನಾಯ್ಕ (62) ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮೇ 29ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಆರೋಪಿತರಾದ ಶಿವಾನಂದ ಪರಮೇಶ್ವರ ನಾಯ್ಕ (65) ಹಾಗೂ ಮಹೇಶ ಪರಮೇಶ್ವರ ನಾಯ್ಕ (58) ಹುಬ್ಬಣಗೇರಿ ಗ್ರಾಮದ ಸರ್ವೆ ನಂ. 68/6ಬಿರಲ್ಲಿರುವ ದೂರುದಾರರ ಮಾಲೀಕತ್ವದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ.
ಜಮೀನಿನಲ್ಲಿದ್ದ ಎರಡು ಮರದ ಕಂಬಗಳನ್ನು ಕಿತ್ತು, ತಂತಿ ಬೇಲಿಯನ್ನು ಹರಿದು ಹಾನಿಗೊಳಿಸಿ, ಬಳಿಕ ತಮ್ಮ ಅಶೋಕ್ ಲೇಲ್ಯಾಂಡ್ ವಾಹನವನ್ನು ದೂರುದಾರರು ಬೆಳೆಸಿದ್ದ ತೆಂಗು ಹಾಗೂ ಅಡಿಕೆ ಗಿಡಗಳ ಮೇಲೆಯೇ ಚಲಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಪ್ರಶ್ನಿಸಿದ ದೂರುದಾರರಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಾಹನ ಹಾಯಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಕೃತ್ಯದಿಂದ ಸುಮಾರು ₹15,000 ಮೌಲ್ಯದ ನಷ್ಟ ಉಂಟಾಗಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
SEO ಪರ್ಮಾಲಿಂಕ್:
kumta-land-trespass-coconut-arecanut-crop-damage-case-hubbanageri