Ad
Home Local News ಅಪಘಾತದಲ್ಲಿ ಗಂಭೀರ ಗಾಯ: ICUನಲ್ಲಿರುವ ಚಿನ್ಮಯ್‌ ಚಿಕಿತ್ಸೆಗೆ ನೆರವಿನ ನಿರೀಕ್ಷೆ

ಅಪಘಾತದಲ್ಲಿ ಗಂಭೀರ ಗಾಯ: ICUನಲ್ಲಿರುವ ಚಿನ್ಮಯ್‌ ಚಿಕಿತ್ಸೆಗೆ ನೆರವಿನ ನಿರೀಕ್ಷೆ

0
100

ಶಿರಸಿ/ಬೆಂಗಳೂರು: ಕಷ್ಟಕಾಲ ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಎಲ್ಲವೂ ಚೆನ್ನಾಗಿಯೇ ಸಾಗುತ್ತಿದೆ ಎನ್ನುವ ಹೊತ್ತಿನಲ್ಲೇ ಒಂದು ಕ್ಷಣದ ಅವಘಡ ಇಡೀ ಬದುಕನ್ನೇ ಬದಲಿಸಿಬಿಡಬಹುದು. ಅಂತಹ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವವರೇ ನಿಜವಾದ ನೆಂಟರಾಗುತ್ತಾರೆ. ನಾವು ದಿನನಿತ್ಯದಲ್ಲಿ ಯಾವುದಕ್ಕೋ ನೂರಾರು, ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಆದರೆ, ಜೀವನಕ್ಕಾಗಿ ಹೋರಾಡುತ್ತಿರುವ ಅಸಹಾಯಕ ಜೀವವೊಂದಕ್ಕೆ ನೀಡುವ ಸಣ್ಣ ನೆರವು ಅದಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿರುತ್ತದೆ.

ಇಂತಹದ್ದೇ ಒಂದು ಕಷ್ಟದ ಸಂದರ್ಭದಲ್ಲಿ ಶಿರಸಿ ತಾಲೂಕಿನ ಯುವಕ ಚಿನ್ಮಯ್ ಜಿ.ಹೆಗಡೆ (22) ಕುಟುಂಬದವರು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಚಿನ್ಮಯ್ ಸದ್ಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ. ಹೀಗಾಗಿ ಕುಟುಂಬದವರು ಹಾಗೂ ಸ್ನೇಹಿತರು ದಾನಿಗಳಲ್ಲಿ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಉಂಚಳ್ಳಿ ಸಮೀಪದ ಸೋಮನಹಳ್ಳಿ ನಿವಾಸಿಯಾಗಿರುವ ಚಿನ್ಮಯ್, ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದು, ಬೆಂಗಳೂರಿನ ಫ್ರುಟ್ಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸೆ.8ರ ರಾತ್ರಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕುಟುಂಬದ ಮನವಿಯಲ್ಲಿ ತಿಳಿಸಲಾಗಿದೆ.

ಅಪಘಾತದ ಬಳಿಕ ಅವರನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ICUನಲ್ಲಿ ವೆಂಟಿಲೇಟರ್‌ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರಂಭಿಕ ಚಿಕಿತ್ಸೆಗೆ ಕುಟುಂಬದವರು ತಮ್ಮಿಂದಾದಷ್ಟು ಹಣವನ್ನು ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆ ಹಾಗೂ ಚೇತರಿಕೆಗೆ ಇನ್ನಷ್ಟು ಹಣದ ಅಗತ್ಯವಿದೆ.

ಚಿನ್ಮಯ್ ಅವರ ಚಿಕಿತ್ಸೆಗೆ ಸುಮಾರು 25 ಲಕ್ಷ ರೂ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ದಾನಿಗಳ ಸಹಕಾರದಿಂದ 2 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದ್ದು, ಇನ್ನೂ ದೊಡ್ಡ ಮೊತ್ತದ ಅಗತ್ಯವಿದೆ.

ಜೀವನದ ಅನಿರೀಕ್ಷಿತ ತಿರುವಿನಲ್ಲಿ ಸಿಲುಕಿರುವ ಚಿನ್ಮಯ್ ಅವರ ಕುಟುಂಬಕ್ಕೆ ಈಗ ಬೇಕಾಗಿರುವುದು ಸಾಧ್ಯವಾದಷ್ಟು ನೆರವು. ದೊಡ್ಡ ಮೊತ್ತದ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ತಮ್ಮ ಕೈಲಾದಷ್ಟು ಸಣ್ಣ ಮೊತ್ತವನ್ನು ನೀಡುವ ಮೂಲಕವೂ ಈ ಕುಟುಂಬದ ಕಷ್ಟದ ಸಂದರ್ಭದಲ್ಲಿ ಜೊತೆಯಾಗಬಹುದು. ಯಾವುದಕ್ಕೋ ಖರ್ಚಾಗುವ ಹಣದ ಒಂದು ಭಾಗವನ್ನಾದರೂ ಒಂದು ಜೀವದ ಉಳಿವಿಗಾಗಿ ನೀಡಿದರೆ, ಆ ನೆರವಿನ ಮೌಲ್ಯ ಬಹಳ ದೊಡ್ಡದು.

ಚಿನ್ಮಯ್ ಅವರ ಚಿಕಿತ್ಸೆಗೆ ನೆರವಾಗಲು ಬಯಸುವವರು ಪೋಸ್ಟರ್‌ನಲ್ಲಿ ನೀಡಿರುವ PhonePe (UPI ನಂಬರ್-‌ 9036945272)ಅಥವಾ ಬ್ಯಾಂಕ್ ಖಾತೆಗಳ ಮೂಲಕ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ನೆರವು ನೀಡುವ ಮುನ್ನ ಖಾತೆ ಹಾಗೂ ಸಂಪರ್ಕ ವಿವರಗಳನ್ನು ಕುಟುಂಬದವರಿಂದ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಕುಟುಂಬದವರ ಸಂಪರ್ಕ/ ಮಾಹಿತಿಗಳ ಅಗತ್ಯವಿದ್ದರೆ 9481987843/9483659824/9036945272 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಚಿನ್ಮಯ್ ಚೇತರಿಸಿಕೊಂಡು ಮತ್ತೆ ಸಹಜ ಬದುಕಿಗೆ ಮರಳಲಿ ಎಂಬ ಆಶಯದೊಂದಿಗೆ, ಅವರ ಕುಟುಂಬದ ಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವವರ ಸಂಖ್ಯೆ ಹೆಚ್ಚಾಗಬೇಕಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!