ಕಾರವಾರ: ಎಲ್‌ಪಿಜಿ ಸಂಪರ್ಕ ಹೊಂದಿರುವ ಮತ್ತು ಇನ್ನೂ ಇ-ಕೆವೈಸಿ (e-KYC) ಪೂರ್ಣಗೊಳಿಸದ ಎಲ್ಲಾ ಗ್ರಾಹಕರು ಆಗಸ್ಟ್ 15ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಕಾರವಾರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಸೇರಿದಂತೆ ತೈಲ ಕಂಪನಿಗಳ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಫಲಾನುಭವಿಗಳ ಮಾಹಿತಿಯ ನಿಖರತೆ ಖಚಿತಪಡಿಸುವುದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದುರುಪಯೋಗ ತಡೆಗಟ್ಟುವುದು ಹಾಗೂ ಅರ್ಹ ಗ್ರಾಹಕರಿಗೆ ನಿರಂತರ ಅನಿಲ ಪೂರೈಕೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
ಇದಕ್ಕಾಗಿ ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರು ವಿಶೇಷ ಇ-ಕೆವೈಸಿ ಅಭಿಯಾನ, ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮನೆ-ಮನೆ ಭೇಟಿ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ವಿಶೇಷವಾಗಿ ವಯೋವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ದಿವ್ಯಾಂಗರಿಗೆ ಡೀಲರ್ ಕಚೇರಿಗೆ ತೆರಳಲು ಸಾಧ್ಯವಾಗದಿದ್ದಲ್ಲಿ, ಅವರ ಮನೆಗಳಿಗೆ ತೆರಳಿ ಇ-ಕೆವೈಸಿ ಪೂರ್ಣಗೊಳಿಸಲು ಅಗತ್ಯ ಸಹಾಯ ಒದಗಿಸುವಂತೆ ವಿತರಕರಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗೆ ಬರುವ ಪಡಿತರ ಚೀಟಿದಾರರಲ್ಲಿ ಇ-ಕೆವೈಸಿ ಪೂರ್ಣಗೊಳಿಸದ ಎಲ್‌ಪಿಜಿ ಗ್ರಾಹಕರಿಗೆ ಈ ಕುರಿತು ಜಾಗೃತಿ ಮೂಡಿಸಿ, ಸಮೀಪದ ಎಲ್‌ಪಿಜಿ ವಿತರಕರನ್ನು ಸಂಪರ್ಕಿಸಿ ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.