33.39 ಕೆಜಿ ಶ್ರೀಗಂಧ ವಶ, ಓರ್ವನ ಬಂಧನ
ಶಿರಸಿ: ಶಿರಸಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಕಾನಗೋಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಕೆತ್ತನೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಬಂಧಿತನನ್ನು ಕಾನಗೋಡ ಗ್ರಾಮದ ಜನತಾ ಕಾಲೋನಿಯ ದಯಾನಂದ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಮಶಿಗದ್ದೆ ಹೊಳೆಕೈನ ಮಂಜುನಾಥ ಅಣ್ಣಪ್ಪ ದೇವಾಡಿಗ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.
ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ 33.390 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ಸಂದೀಪ್ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅಮಿತಕುಮಾರ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ, ಅರಣ್ಯ ವನಪಾಲಕರಾದ ರೋಹಿತ್ ಎಂ. ನಾಯ್ಕ ಹಾಗೂ ಮಂಜುನಾಥ ಜಹಗೀರದಾರ ಭಾಗವಹಿಸಿದ್ದರು.