ಮುಂಡಗೋಡ: ತಾಲೂಕಿನ ಕಾತೂರ ವಲಯದ ಪಾಳ ಗ್ರಾಮದ ಕರ್ನಾಟಕ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಅಡುಗೆ ಕೋಣೆಗೆ ನಾಗರಹಾವೊಂದು ನುಗ್ಗಿದ್ದು, ಕೆಲಕಾಲ ಶಾಲಾ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಡುಗೆ ಕೋಣೆಯಲ್ಲಿ ಹಾವು ಕಾಣಿಸಿಕೊಂಡಿರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಪಾಳ ಉಪ ವಲಯ ಅರಣ್ಯಾಧಿಕಾರಿ ಹಾಗೂ ಉರಗ ರಕ್ಷಕ ಸುನೀಲ್ ಹೊನ್ನಾವರ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸುನೀಲ್ ಹೊನ್ನಾವರ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದರು.
ಬಳಿಕ ಹಾವನ್ನು ಯಾವುದೇ ಅಪಾಯವಾಗದಂತೆ ಅದರ ನೈಸರ್ಗಿಕ ಆವಾಸಸ್ಥಾನವಾದ ಸಮೀಪದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು. ಕಾರ್ಯಾಚರಣೆಯ ಬಳಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸಿಬ್ಬಂದಿಗೆ ಹಾವುಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಹಾವು ಕಾಣಿಸಿಕೊಂಡಾಗ ಆತಂಕಗೊಂಡು ಅದನ್ನು ಕೊಲ್ಲುವ ಬದಲು ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕರಾದ ಜಗದೀಶ್ ಗೌಡ್ರು, ಮಾದೇವ ಯಲ್ಲಪ್ಪ ಛಲವಾದಿ ಹಾಗೂ ಬಸವರಾಜ್ ಗೌಡ್ರು ಭದ್ರಾಪುರ, ವಸತಿ ಶಾಲೆಯ ಶಿಕ್ಷಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಾವಿನ ಬಗ್ಗೆ ಭಯ ಬೇಡ, ಆದರೆ ಜಾಗ್ರತೆ ಇರಲಿ ಎಂಬ ಸಂದೇಶವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೀಡಿದರು.