ಮುಂಡಗೋಡ: ಯಲ್ಲಾಪುರ ಮತಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಗುರುವಾರ ತಾಲೂಕಿನ ಕುಸೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ನೂತನ ತರಗತಿ ಕೊಠಡಿಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶ್ರೀ ದುರ್ಗಾದೇವಿ ಟ್ರಸ್ಟ್ ಕಮಿಟಿ ಕೈಗೊಂಡಿರುವ ಈ ಸೇವೆ ಶ್ಲಾಘನೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಇತರ ಸಂಸ್ಥೆಗಳಿಗೂ ಮಾದರಿಯಾಗಬೇಕು. ಸರ್ಕಾರದೊಂದಿಗೆ ಸಮಾಜದ ಸಹಕಾರವೂ ಇದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸುಮಾರು 13.85 ಲಕ್ಷ ರೂ ವೆಚ್ಚದಲ್ಲಿ ಶ್ರೀ ದುರ್ಗಾದೇವಿ ಟ್ರಸ್ಟ್ ಕಮಿಟಿ ವತಿಯಿಂದ ಈ ತರಗತಿ ಕೊಠಡಿ ನಿರ್ಮಿಸಲ್ಪಟ್ಟಿದ್ದು, ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಕೊಡುಗೆಯಾಗಿದೆ. ಹೊಸ ತರಗತಿ ಕೊಠಡಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ವಾತಾವರಣ ಒದಗಿಸುವುದರ ಜೊತೆಗೆ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ.