ಕಾರವಾರ: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಸೆ.5ರಂದು ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಜಾಸೇವೆ ಆಂದೋಲನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆ ನಡೆಯುವ ಸ್ಥಳದಲ್ಲಿ ‘ಗ್ರಾಮ ಒನ್’ ಕೌಂಟರ್‌ಗಳನ್ನು ಸ್ಥಾಪಿಸಿ, ಸಾರ್ವಜನಿಕರಿಂದ ಯಾವುದೇ ಶುಲ್ಕ ಪಡೆಯದೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ಈಗಾಗಲೇ ಕುಂದುಕೊರತೆ ಇತ್ಯರ್ಥಗೊಂಡಿರುವ ಫಲಾನುಭವಿಗಳಿಗೆ ಸ್ಥಳದಲ್ಲೇ ಅನುಮೋದನಾ ಪತ್ರ ಅಥವಾ ಪರಿಹಾರ ಪ್ರಮಾಣಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜನರಿಗೆ ಕಚೇರಿಗಳ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಮೂಲಭೂತ ವೈದ್ಯಕೀಯ ಸೌಲಭ್ಯ, ನಿರಂತರ ವಿದ್ಯುತ್ ಪೂರೈಕೆ ಹಾಗೂ ಸಾರ್ವಜನಿಕರು ಸಭೆಗೆ ಆಗಮಿಸಲು ಅನುಕೂಲವಾಗುವಂತೆ ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರಮುಖ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಯೋಜನೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಸ್ಥಳದಲ್ಲೇ ಕೌಂಟರ್‌ಗಳನ್ನು ತೆರೆದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದರು.
ಜಿಲ್ಲೆಯ ವಿವಿಧ ಭಾಗಗಳಲ್ಲೂ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳನ್ನು ಆಯೋಜಿಸಲು ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಭಟ್ಕಳ ತಾಲೂಕಿನ ಮುರುಡೇಶ್ವರ, ಶಿರಸಿ ತಾಲೂಕಿನ ಜಾನ್ಮನೆ, ಯಲ್ಲಾಪುರ ತಾಲೂಕಿನ ಮಂಚಿಕೇರಿ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಹಾಗೂ ಕುಮಟಾ ತಾಲೂಕಿನ ಕೂಜಳ್ಳಿ ಹೋಬಳಿಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸರ್ಕಾರವೇ ಸಾರ್ವಜನಿಕರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ತುರ್ತು ಸ್ಪಂದನೆ ನೀಡುವ ಈ ಜನಪರ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಆಯೋಜಿಸಬೇಕು ಎಂದು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.