ಅಡಕೆ ತೋಟದಲ್ಲಿ ಮಣ್ಣನ್ನು ಕಾಪಾಡಲು ಹೊಸ ಹೆಜ್ಜೆ
ಮಳೆ ಬಂದಾಗ ಮಲೆನಾಡು ಹಸಿರಿನಿಂದ ಕಂಗೊಳಿಸುತ್ತದೆ. ಬೆಟ್ಟ-ಗುಡ್ಡಗಳು ಹೊದಿಕೆಯಂತೆ ಮಂಜು ಧರಿಸುತ್ತವೆ. ಅಡಕೆ ತೋಟಗಳು ಮಳೆಯ ಹನಿಗಳಿಂದ ನಳನಳಿಸುತ್ತವೆ.
ಆದರೆ ಇದೇ ಮಳೆ ರೈತನಿಗೆ ಕೆಲವೊಮ್ಮೆ ವರವಾದರೆ, ಕೆಲವೊಮ್ಮೆ ಸವಾಲಾಗಿಯೂ ಪರಿಣಮಿಸುತ್ತದೆ. ವಿಶೇಷವಾಗಿ ಅಡಕೆ ತೋಟಗಳಲ್ಲಿ ಮಳೆಯ ನೀರಿನೊಂದಿಗೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವುದು ರೈತರನ್ನು ವರ್ಷದಿಂದ ವರ್ಷಕ್ಕೆ ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ದುಬಾರಿ ತಂತ್ರಜ್ಞಾನವಲ್ಲ, ಬಳಸಿ ಬಿಟ್ಟ ಹಳೆಯ ಸೀರೆಗಳೇ ಪರಿಹಾರವಾಗುತ್ತಿರುವುದು ಕೃಷಿ ಬದುಕಿನ ಒಂದು ವಿಶಿಷ್ಟ ನುಡಿಚಿತ್ರ.
ಅಡಕೆ ಮರಗಳು ಎತ್ತರವಾಗಿ ಬೆಳೆದಿರುತ್ತವೆ. ಮಳೆಗಾಲದಲ್ಲಿ ಮರದ ಹೆಡೆಗಳ ಮೇಲೆ ಬೀಳುವ ಮಳೆಯ ಹನಿಗಳು ಒಂದೇ ಕಡೆ ಕೇಂದ್ರೀಕೃತವಾಗಿ ಬಸಿಗಾಲುವೆಗಳ ಮೇಲೆ ಅಪ್ಪಳಿಸುತ್ತವೆ. ನೀರಿನ ಹೊಡೆತಕ್ಕೆ ಮಣ್ಣು ಕೊಚ್ಚಿಹೋಗುತ್ತದೆ. ಗಿಡಗಳ ಬೇರಿನ ಭಾಗ ಬಯಲಾಗುತ್ತದೆ. ತೋಟದ ಫಲವತ್ತತೆ ಕಡಿಮೆಯಾಗುತ್ತದೆ.
ಇದನ್ನು ತಡೆಯಲು ಹಿಂದೆ ರೈತರು ದರಕು, ಕರಡ, ಹಸಿ ಸೊಪ್ಪುಗಳ ಮುಚ್ಚಿಗೆ ಹಾಕುತ್ತಿದ್ದರು. ಆದರೆ ಕಾಲ ಬದಲಾಗಿದೆ. ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಸಿಗುವ ಕಾರ್ಮಿಕರ ವೆಚ್ಚವೂ ದುಬಾರಿಯಾಗಿದೆ. ಹೀಗಾಗಿ ಕಡಿಮೆ ಖರ್ಚಿನ ಪರ್ಯಾಯ ಹುಡುಕಾಟ ಆರಂಭವಾಯಿತು.
ಆ ಹುಡುಕಾಟವೇ ಇಂದು ಹಳೆಯ ಸೀರೆಗಳನ್ನು ಅಡಕೆ ತೋಟಕ್ಕೆ ಕರೆತಂದಿದೆ. ನಗರಗಳಲ್ಲಿ, ಮನೆಗಳಲ್ಲಿ ಬಳಸಿ ಬಿಟ್ಟ ಸೀರೆಗಳು ಈಗ ಮಲೆನಾಡಿನ ಅಡಕೆ ತೋಟಗಳಲ್ಲಿ ಹೊಸ ಜೀವ ಪಡೆದಿವೆ. ಬಸಿಗಾಲುವೆಗಳ ಸುತ್ತ ಸೀರೆಗಳನ್ನು ಹಾಸುವುದರಿಂದ ಮಳೆಯ ನೀರಿನ ನೇರ ಹೊಡೆತ ಕಡಿಮೆಯಾಗುತ್ತದೆ. ಮಣ್ಣು ತನ್ನ ಸ್ಥಳದಲ್ಲೇ ಉಳಿಯುತ್ತದೆ. ಜೊತೆಗೆ ಕಳೆಗಿಡಗಳ ಬೆಳವಣಿಗೆಯೂ ನಿಯಂತ್ರಣಕ್ಕೆ ಬರುತ್ತದೆ. ಮುಖ್ಯವಾಗಿ, ಪ್ಲಾಸ್ಟಿಕ್ ಮುಚ್ಚಿಗೆಯಂತೆ ಮಣ್ಣಿನ ಉಸಿರುಗಟ್ಟಿಸುವ ಕೆಲಸ ಇದರಿಂದ ಆಗುವುದಿಲ್ಲ. ಸೀರೆಯ ನಾರುಗಳ ನಡುವೆ ಗಾಳಿ ಮತ್ತು ತೇವಾಂಶ ಸಹಜವಾಗಿ ಹರಿದಾಡುತ್ತವೆ. ಮಣ್ಣಿನ ಜೀವಂತಿಕೆ ಉಳಿಯುತ್ತದೆ.
ಬಳಸಿ ಬಿಸಾಡಬೇಕಿದ್ದ ವಸ್ತುವೊಂದು ಮತ್ತೆ ಉಪಯೋಗಕ್ಕೆ ಬರುತ್ತಿದೆ. ಪರಿಸರಕ್ಕೆ ಹೊರೆ ಆಗಬೇಕಿದ್ದ ಬಟ್ಟೆ, ಮಣ್ಣನ್ನು ಕಾಪಾಡುವ ಕವಚವಾಗುತ್ತಿದೆ. ಕೃಷಿಯಲ್ಲಿ ಮರುಬಳಕೆಯ ಸಂಸ್ಕೃತಿ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ರೈತನ ಜೇಬಿಗೂ ಇದು ಹೊರೆಯಾಗುವುದಿಲ್ಲ. ದುಬಾರಿ ಪ್ಲಾಸ್ಟಿಕ್ ಖರೀದಿಸುವ ಅವಶ್ಯಕತೆ ಇಲ್ಲ. ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ಸಿಗುತ್ತದೆ.
ಕೃಷಿ ಅಂದರೆ ಕೇವಲ ಬೆಳೆ ಬೆಳೆಯುವ ಕೆಲಸವಲ್ಲ. ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವ ಕಲೆಯೂ ಹೌದು. ಮಲೆನಾಡಿನ ರೈತರು ಇಂದು ಹಳೆಯ ಸೀರೆಗಳ ಮೂಲಕ ಅದನ್ನೇ ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ. ವಿಜ್ಞಾನ, ಅನುಭವ ಮತ್ತು ಸರಳತೆಯ ಮಿಶ್ರಣವಾದ ಈ ಪ್ರಯೋಗ ಮಣ್ಣನ್ನು ಕಾಪಾಡುತ್ತಿದೆ, ಪರಿಸರವನ್ನು ಉಳಿಸುತ್ತಿದೆ ಮತ್ತು ಕೃಷಿಯ ನಿಜವಾದ ಜಾಣ್ಮೆ ಇನ್ನೂ ಹಳ್ಳಿಗಳಲ್ಲೇ ಜೀವಂತವಾಗಿದೆ ಎಂಬುದನ್ನು ನೆನಪಿಸುತ್ತಿದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿಗೆ ದೊಡ್ಡ ಪರಿಹಾರಗಳ ಅಗತ್ಯವಿರುವುದಿಲ್ಲ. ಮನೆಯ ಮೂಲೆಯಲ್ಲಿ ಮರೆತುಹೋಗಿರುವ ಒಂದು ಹಳೆಯ ಸೀರೆಯೂ ಸಾಕಾಗಬಹುದು!