Friday, June 19, 2026
HomeLocal Newsಪ್ರಿಯಾಂಕ್ ಖರ್ಗೆಗೆ ಆರ್‍ಎಸ್‍ಎಸ್ ಬಗ್ಗೆ ಏನು ಗೊತ್ತು?

ಪ್ರಿಯಾಂಕ್ ಖರ್ಗೆಗೆ ಆರ್‍ಎಸ್‍ಎಸ್ ಬಗ್ಗೆ ಏನು ಗೊತ್ತು?

ಸಂಘದ ಕಾರ್ಯವೈಖರಿಯ ಬಗ್ಗೆ ಶಾಂತಾರಾಮ ಸಿದ್ದಿ ಖಡಕ್ ಪ್ರತಿಕ್ರಿಯೆ

ಬೆಂಗಳೂರು: ಮತಾಂತರಗೊಂಡ ಬುಡಕಟ್ಟು ಸಮುದಾಯದವರಿಂದ ನಿಜವಾದ ಮೂಲ ಬುಡಕಟ್ಟಿನವರಿಗೆ ಅನ್ಯಾಯವಾಗುತ್ತಿದ್ದು, ಮತಾಂತರ ಹೊಂದಿದವರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ಕೈಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 12 ಕೋಟಿ ಬುಡಕಟ್ಟು ಸಮುದಾಯದ ಜನರಿದ್ದಾರೆ. ಅವರಲ್ಲಿ 1-2 ಕೋಟಿ ಜನ ಮತಾಂತರಗೊಂಡಿದ್ದಾರೆ. ಗಿರಿಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮತಾಂತರಿ ಬುಡಕಟ್ಟಿನವರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇವರು ಇತ್ತ ಬುಡಕಟ್ಟು ಹಾಗೂ ಅತ್ತ ಮತಾಂತರಗೊಂಡ ಧರ್ಮದ ಎರಡೂ ಕಡೆಯ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ಅನ್ಯಾಯದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ರಾಷ್ಟ್ರಮಟ್ಟದ ‘ಜನಜಾತಿ ಸುರಕ್ಷಾ ವೇದಿಕೆ’ ವತಿಯಿಂದ ಬೃಹತ್ ಸಮ್ಮೇಳನ ಆಯೋಜಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಈ ಸಮ್ಮೇಳನದ ಬಳಿಕ, ರಾಷ್ಟ್ರಪತಿಗಳನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ನಾವು ಯಾವುದೇ ಧರ್ಮ ಅಥವಾ ಮತವನ್ನು ವಿರೋಧಿಸುವುದಿಲ್ಲ. ಆದರೆ, ಬೇರೆ ಧರ್ಮಕ್ಕೆ ಮತಾಂತರ ಹೊಂದಿದವರು ಇಲ್ಲಿನ ಮೂಲ ಬುಡಕಟ್ಟು ಜನರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಾರದು ಎನ್ನುವುದಷ್ಟೇ ನಮ್ಮ ಸ್ಪಷ್ಟ ನಿಲುವು ಎಂದು ಅವರು ಪ್ರತಿಪಾದಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದ ವಿಚಾರವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ,

ಆರ್‍ಎಸ್‍ಎಸ್ ಶಾಖೆಗೆ ನಿಯಮಿತವಾಗಿ ಹೋಗುವವರಿಗೇ ಸಂಘ ನೂರಕ್ಕೆ ನೂರರಷ್ಟು ಅರ್ಥವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಪಾಪ, ಪ್ರಿಯಾಂಕ್ ಖರ್ಗೆಯವರಿಗೆ ಅದರ ಬಗ್ಗೆ ಏನು ಗೊತ್ತಾಗಲು ಸಾಧ್ಯ ಎಂದು ಲೇವಡಿ ಮಾಡಿದರು. ಪ್ರಿಯಾಂಕ್ ಖರ್ಗೆ ಅವರು ಕೇವಲ ಕಾನೂನಾತ್ಮಕವಾಗಿ ಏನೋ ಪ್ರಶ್ನೆ ಕೇಳಿರಬಹುದು ಅಷ್ಟೇ ಎಂದು ನುಡಿದ ಅವರು, ಸಂಘದ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಿದರು.

ಆರ್‍ಎಸ್‍ಎಸ್ ಕೇವಲ ವ್ಯಕ್ತಿ ನಿರ್ಮಾಣ ಮಾಡುವ ಶಿಸ್ತಿನ ಕೇಂದ್ರವಾಗಿದೆ. ಹಣಕಾಸಿನ ಪ್ರಶ್ನೆಯೇ ಇಲ್ಲ. ಇಲ್ಲಿ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳು ನಡೆಯುವುದಿಲ್ಲ. ಹಾಗಾಗಿ ಹಣಕಾಸಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ನಮ್ಮ ಆರ್‍ಎಸ್‍ಎಸ್ ಚಟುವಟಿಕೆಗಳೆಲ್ಲವೂ ತೆರೆದ ಮೈದಾನದಲ್ಲಿ ಎಲ್ಲರ ಕಣ್ಣೆದುರೇ ನಡೆಯುತ್ತವೆ. ಅದನ್ನು ಬಿಟ್ಟು ಉಳಿದ ಅನಗತ್ಯ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ನಮಗಿಲ್ಲ ಎಂದು ಉತ್ತರಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share