ಅಂಕೋಲಾ: ಯಾವುದೇ ಪಾಸ್ ಅಥವಾ ಪರವಾನಗಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯ ಸಾರ್ವಜನಿಕ ಸ್ಥಳದಲ್ಲಿ ಆಗಸ್ಟ್ 28ರಂದು ರಾತ್ರಿ ಸುಮಾರು 7.45ರ ವೇಳೆಗೆ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ಹಳವಳ್ಳಿ ಗ್ರಾಮದ 55 ವರ್ಷದ ಕೂಲಿ ಕಾರ್ಮಿಕ ಪುಟ್ಟಾ ಸಾನು ಸಿದ್ದಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ&ಸು) ಗುರುನಾಥ ಹಾದಿಮನಿ ಅವರು ಸರ್ಕಾರದ ಪರವಾಗಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ದಾಳಿಯ ವೇಳೆ ಆರೋಪಿತನ ಬಳಿಯಲ್ಲಿ 90 ಎಂಎಲ್ ಪ್ರಮಾಣದ ಲೇಬಲ್ ಹೊಂದಿರುವ ತುಂಬಿದ ಟೇಟ್ರಾ ಪ್ಯಾಕ್‌ಗಳ ಎರಡು ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಅವುಗಳ ಅಂದಾಜು ಮೌಲ್ಯ 110 ರೂ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಎರಡು ಖಾಲಿ ಟೇಟ್ರಾ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಹಾಗೂ ಸ್ಟೀಲ್ ಗ್ಲಾಸ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಯಾವುದೇ ಪಾಸ್ ಅಥವಾ ಪರವಾನಗಿ ಪಡೆಯದೆ ತನ್ನ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪುಟ್ಟಾ ಸಾನು ಸಿದ್ದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.