Saturday, May 30, 2026
HomeInformationಸಾಮಾನ್ಯ ನಾಗರಿಕನ ಪ್ರಬಲ ಅಸ್ತ್ರ ʻRTIʼ

ಸಾಮಾನ್ಯ ನಾಗರಿಕನ ಪ್ರಬಲ ಅಸ್ತ್ರ ʻRTIʼ

ಒಂದು ಕಾಲದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯುವುದು ಸಾಮಾನ್ಯ ನಾಗರಿಕನಿಗೆ ಅಸಾಧ್ಯವೆನಿಸುವ ಕೆಲಸವಾಗಿತ್ತು. ಫೈಲ್ ಮೇಲಧಿಕಾರಿಗಳ ಬಳಿ ಇದೆ, ನಾಳೆ ಬನ್ನಿ, ಈ ಮಾಹಿತಿ ಕೊಡಲು ಆಗಲ್ಲ ಎಂಬ ಉತ್ತರಗಳ ನಡುವೆ ಜನರು ಬೇಸತ್ತು ಹೋಗುತ್ತಿದ್ದರು.

ಆದರೆ 2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ (RTI) ಭಾರತೀಯ ಪ್ರಜಾಪ್ರಭುತ್ವದ ಚಿತ್ರಣವನ್ನೇ ಬದಲಿಸಿತು. ಇಂದು ಒಬ್ಬ ಸಾಮಾನ್ಯ ನಾಗರಿಕನೂ ಸರ್ಕಾರಿ ಇಲಾಖೆಗಳ ಕಾರ್ಯವೈಖರಿ, ಕಾಮಗಾರಿಗಳ ವೆಚ್ಚ, ನೇಮಕಾತಿ, ಅನುದಾನ ಬಳಕೆ, ಭೂ ದಾಖಲೆ, ಟೆಂಡರ್ ವಿವರ ಸೇರಿದಂತೆ ಅನೇಕ ಮಾಹಿತಿಗಳನ್ನು ಕಾನೂನುಬದ್ಧವಾಗಿ ಕೇಳಬಹುದಾದ ಹಕ್ಕು ಪಡೆದಿದ್ದಾನೆ.

ಈ ಕಾಯ್ದೆ 2005ರ ಅಕ್ಟೋಬರ್ 12ರಿಂದ ದೇಶಾದ್ಯಂತ ಜಾರಿಗೆ ಬಂತು. ಇದರ ಉದ್ದೇಶ ಸರ್ಕಾರದ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವುದು. ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಭಾರತೀಯ ನಾಗರಿಕನು ಸರ್ಕಾರಿ ಕಚೇರಿಗಳಲ್ಲಿರುವ ದಾಖಲೆಗಳು, ಆದೇಶಗಳು, ಕಾಮಗಾರಿಗಳ ಮಾಹಿತಿ, ಸರ್ಕಾರಿ ವೆಚ್ಚ, ನೇಮಕಾತಿ ವಿವರ, ಯೋಜನೆಗಳ ಅನುಷ್ಠಾನ, ಅನುದಾನದ ಬಳಕೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಕೇಳಬಹುದು.

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ವಿದ್ಯುತ್ ಇಲಾಖೆ, ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳು RTI ವ್ಯಾಪ್ತಿಗೆ ಬರುತ್ತವೆ.

ಸರ್ಕಾರದಿಂದ ನೇರ ಅಥವಾ ಪರೋಕ್ಷ ಅನುದಾನ ಪಡೆಯುವ ಅನೇಕ ಸಂಸ್ಥೆಗಳಿಗೂ ಈ ಕಾನೂನು ಅನ್ವಯಿಸುತ್ತದೆ. ಆದರೆ ಎಲ್ಲಾ ಮಾಹಿತಿಯನ್ನೂ ಪಡೆಯಲು ಅವಕಾಶವಿಲ್ಲ. ರಾಷ್ಟ್ರದ ಭದ್ರತೆ, ಸೇನಾ ರಹಸ್ಯ ಮಾಹಿತಿ, ಗುಪ್ತಚರ ಇಲಾಖೆಯ ದಾಖಲೆಗಳು, ನ್ಯಾಯಾಲಯದಿಂದ ನಿರ್ಬಂಧಿತ ಮಾಹಿತಿ, ವ್ಯಕ್ತಿಯ ಖಾಸಗಿ ವೈದ್ಯಕೀಯ ಅಥವಾ ವೈಯಕ್ತಿಕ ಮಾಹಿತಿಗಳಿಗೆ ವಿನಾಯಿತಿ ನೀಡಲಾಗಿದೆ.

ಈಗ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆನ್‌ಲೈನ್ ಮೂಲಕ (https://rtionline.karnataka.gov.in) ಮೂಲಕ RTI ಅರ್ಜಿ ಸಲ್ಲಿಸುವ ವ್ಯವಸ್ಥೆ ಲಭ್ಯವಿದೆ. ಸಾಮಾನ್ಯವಾಗಿ 30 ದಿನಗಳೊಳಗೆ ಮಾಹಿತಿ ನೀಡಬೇಕಾಗುತ್ತದೆ. ಜೀವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ತುರ್ತು ವಿಷಯವಾದರೆ 48 ಗಂಟೆಗಳೊಳಗೆ ಮಾಹಿತಿ ನೀಡುವ ನಿಯಮವಿದೆ. ಮಾಹಿತಿ ನೀಡದಿದ್ದರೆ ಅಥವಾ ಅಪೂರ್ಣ ಮಾಹಿತಿ ನೀಡಿದರೆ ಮೊದಲ ಮೇಲ್ಮನವಿ ಮತ್ತು ನಂತರ ರಾಜ್ಯ ಮಾಹಿತಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಬಹುದು.

ಕರ್ನಾಟಕದಲ್ಲಿ ಪ್ರತಿವರ್ಷ ಲಕ್ಷಾಂತರ RTI ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಗ್ರಾಮ ಪಂಚಾಯತ್ ಮಟ್ಟದಿಂದ ವಿಧಾನಸೌಧದವರೆಗೆ ಜನರು ಪ್ರಶ್ನೆ ಕೇಳುತ್ತಿದ್ದಾರೆ. ಭೂ ದಾಖಲೆ, ರಸ್ತೆ ಕಾಮಗಾರಿ, ಅನುದಾನ ಬಳಕೆ, ಪೊಲೀಸ್ ತನಿಖೆ, ನೇಮಕಾತಿ ಅಕ್ರಮ, ಕಟ್ಟಡ ನಿರ್ಮಾಣ, ಸರ್ಕಾರಿ ಯೋಜನೆಗಳ ಅನುಷ್ಠಾನ ಮುಂತಾದ ವಿಷಯಗಳಲ್ಲಿ ಹೆಚ್ಚಿನ ಅರ್ಜಿಗಳು ಬರುತ್ತಿವೆ. ದೇಶದ ಮಟ್ಟದಲ್ಲಿಯೂ RTI ಒಂದು ಪ್ರಬಲ ನಾಗರಿಕ ಹಕ್ಕಿನ ಸಾಧನವಾಗಿ ಬೆಳೆಯುತ್ತಿದೆ.

ಈ ಕಾಯ್ದೆಯಿಂದ ಹಲವೆಡೆ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ಸಮಸ್ಯೆಗಳೂ ಇಲ್ಲವೆಂದಲ್ಲ. ಕೆಲವೊಮ್ಮೆ ಮಾಹಿತಿ ನೀಡಲು ವಿಳಂಬ ಮಾಡುವುದು, ಅಪೂರ್ಣ ಮಾಹಿತಿ ನೀಡುವುದು, ಅಧಿಕಾರಿಗಳ ನಿರ್ಲಕ್ಷ್ಯ, ಅರ್ಜಿದಾರರ ಮೇಲೆ ಒತ್ತಡ ಹೇರುವುದು ಮುಂತಾದ ಆರೋಪಗಳೂ ಕೇಳಿಬರುತ್ತವೆ.

ಕೆಲ RTI ಹೋರಾಟಗಾರರ ಮೇಲೆ ದಾಳಿಗಳು ನಡೆದ ಉದಾಹರಣೆಗಳೂ ದೇಶದಲ್ಲಿವೆ. ಆದರೂ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕನಿಗೆ ಸರ್ಕಾರವನ್ನು ಪ್ರಶ್ನಿಸುವ, ಉತ್ತರ ಕೇಳುವ, ದಾಖಲೆ ಪರಿಶೀಲಿಸುವ ಶಕ್ತಿಯನ್ನು ನೀಡಿದ ಮಹತ್ವದ ಕಾನೂನು ಎಂದರೆ ಮಾಹಿತಿ ಹಕ್ಕು ಕಾಯ್ದೆ. ಸರಿಯಾದ ರೀತಿಯಲ್ಲಿ RTI ಬಳಸಿದರೆ, ಜನರ ಪ್ರಶ್ನೆಗೆ ಸರ್ಕಾರ ಉತ್ತರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share