ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ
ಶಿರಸಿ: ರಸ್ತೆಗಳಲ್ಲಿ ಬೃಹತ್ ಹೊಂಡಗಳು, ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲದೆ ಪರದಾಟ, ಸಮಸ್ಯೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಗದರಿಕೆ ಇವೆಲ್ಲವನ್ನು ಗಮನಿಸಿದರೆ ಕಿತ್ತುಹೋಗಿರುವುದು ಕೇವಲ ರಸ್ತೆಗಳಲ್ಲ, ರಾಜ್ಯ ಸರ್ಕಾರದ ವ್ಯವಸ್ಥೆಯೇ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಸಿ–ಸಿದ್ದಾಪುರ ಕ್ಷೇತ್ರದ ಬಹುತೇಕ ರಸ್ತೆಗಳು ಹೊಂಡಗಳಿಂದ ತುಂಬಿದ್ದರೂ ಅವುಗಳನ್ನು ಮುಚ್ಚುವ ಕನಿಷ್ಠ ಕಾರ್ಯವೂ ನಡೆಯುತ್ತಿಲ್ಲ. ಶಿರಸಿ ನಗರದಲ್ಲಿನ ಐದು ರಸ್ತೆ ವೃತ್ತದ ಬೃಹತ್ ಹೊಂಡಗಳನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರೇ ಸೇರಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ಯಂತ್ರದ ವೈಫಲ್ಯಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
ಶಿರಸಿ–ಸಿದ್ದಾಪುರ ಮುಖ್ಯ ರಸ್ತೆಯ ಅಜ್ಜಿಬಳ ಸಮೀಪ ರಸ್ತೆ ಹೊಂಡದಿಂದ ಯುವಕನೊಬ್ಬ ಇತ್ತೀಚೆಗೆ ಮೃತಪಟ್ಟಿರುವುದನ್ನು ಉಲ್ಲೇಖಿಸಿರುವ ಅವರು, ಇನ್ನೆಷ್ಟು ಸಾವು-ನೋವು ಸಂಭವಿಸಿದ ಬಳಿಕ ಸರ್ಕಾರ ಹಾಗೂ ಅಧಿಕಾರಿಗಳಿಗೆ ರಸ್ತೆ ದುರಸ್ತಿ ನೆನಪಾಗಲಿದೆ ಎಂದು ಪ್ರಶ್ನಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿಯೂ ಸಾರ್ವಜನಿಕರೇ ತಮ್ಮ ರಸ್ತೆಗಳ ಹೊಂಡಗಳನ್ನು ಮುಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಸ್ ವ್ಯವಸ್ಥೆಯ ಸಮಸ್ಯೆಯೂ ಜನರನ್ನು ಕಾಡುತ್ತಿದೆ. ಸಾರಿಗೆ ಬಸ್‌ಗಳನ್ನೇ ನಂಬಿಕೊಂಡು ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ ಪರದಾಡುತ್ತಿದ್ದಾರೆ. ಸಮಸ್ಯೆ ಕುರಿತು ಪ್ರಶ್ನಿಸಿದಾಗ ವಿದ್ಯಾರ್ಥಿಗಳ ಅಹವಾಲು ಆಲಿಸುವ ಬದಲು ಅಧಿಕಾರಿಗಳು ಗದರಿಸುವ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.
ನಿಗದಿತ ಮಾರ್ಗಗಳಲ್ಲಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತವೆ ಎಂಬ ನಂಬಿಕೆಯೇ ಜನರಲ್ಲಿ ಇಲ್ಲದಂತಾಗಿದೆ. ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೆ ಈ ಅವ್ಯವಸ್ಥೆಯ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.