Friday, July 24, 2026
Join WhatsApp Group
HomeLocal Newsಗುಡ್ಡಗಾಡಿನ ಹುಡುಗಿ ಸಮುದಾಯಕ್ಕೇ ಪ್ರಥಮ!

ಗುಡ್ಡಗಾಡಿನ ಹುಡುಗಿ ಸಮುದಾಯಕ್ಕೇ ಪ್ರಥಮ!

ಈಕೆಯ ಶಿಕ್ಷಣಕ್ಕೆ ಬೇಕಿದೆ ಸಮಾಜದ ಬೆಂಬಲ

– ಹೆಗ್ಗಾರ ಪ್ರಶಾಂತ

ಅಂಕೋಲಾ: ತಾಲೂಕಿನ ಹಳವಳ್ಳಿ ಗ್ರಾಮದ ಕಟ್ಟೇಪಾಲು ಎಂಬ ಗುಡ್ಡಗಾಡಿನ ಪ್ರದೇಶದ ಸರೋಜಾ ಮತ್ತು ಜಗದೀಶ ಸಿದ್ದಿ ದಂಪತಿಯ ಮಗಳು ನಾಗಶ್ರೀ, ಕಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 94.24 ಅಂಕಗಳಿಸಿ ಸಿದ್ದಿ ಸಮುದಾಯದಲ್ಲೇ ಅಪರೂಪದ ಸಾಧನೆ ಮೆರೆದಿದ್ದಾಳೆ.

ಅದರಲ್ಲೂ ಯಾವುದೇ ಕೋಚಿಂಗ್ ಇಲ್ಲದೆ, ಮನೆಯಲ್ಲಿ ಮೊಬೈಲ್ ಸಿಗ್ನಲ್ ಸಹ ಇಲ್ಲದ ಪರಿಸ್ಥಿತಿಯಲ್ಲಿ ಕನ್ನಡ ಮತ್ತು ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಖಂಡಿತವಾಗಿಯೂ ಎಲ್ಲರಿಗೂ ಇವಳು ಮಾದರಿಯಾಗಿದ್ದಾಳೆ.

ತಂದೆ-ತಾಯಿ ಕೂಲಿ ಮಾಡಿ ಬದುಕುವ ಈ ಕುಟುಂಬ ಅರಣ್ಯದ ಒಳಭಾಗದಲ್ಲಿದ್ದು, ದಿನವೂ ಎರಡು ಕಿಲೋಮೀಟರ್ ನಡೆದು ಕಮ್ಮಾಣಿ ಬಸ್ ಹಿಡಿದು, ಹತ್ತು ಕಿಲೋಮೀಟರ್ ದೂರದ ಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಗೆ ಬರುತ್ತಿದ್ದ ಈ ಕುವರಿ ಇಂದು ಎಲ್ಲರೂ ಕಣ್ಣರಳಿಸುವ ಸಾಧನೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಸಮುದಾಯದಲ್ಲೇ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದವಳು ಎಂಬ ಹೆಮ್ಮೆಯನ್ನೂ ಪಡೆದಿದ್ದಾಳೆ.

“ನಿನ್ನ ಸಾಧನೆಗೆ ಕಾರಣವೇನು?” ಎಂದು ಕೇಳಿದರೆ, ಮುಗ್ಧವಾಗಿ “ಶಿಕ್ಷಕರು ಸಾಧನೆ ಮಾಡು ಎಂದು ಹೇಳಿದ್ದರು. ಅದಕ್ಕಾಗಿ ನಿತ್ಯವೂ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಓದುತ್ತಿದ್ದೆ. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಮುಂದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಂದುವರೆಯುವ ಮಹದಾಸೆಯಿದೆ” ಎಂದು ತಿಳಿಸುತ್ತಾಳೆ.

“ಮಗಳನ್ನು ಓದುವ ಆಸೆಗೆ ಪೂರಕವಾಗಿ ಓದಿಸಿದ್ದೇನೆ. ಮುಂದಿನ ಶಿಕ್ಷಣದ ಬಗ್ಗೆ ಚಿಂತೆಯಾಗಿದೆ. ಮಗಳಿಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇದೆ. ಯಾವ ಕಡೆ ಕಾಲೇಜಿಗೆ ಸೇರಿಸಬೇಕೆಂಬ ಗೊಂದಲವಿದೆ. ನಮ್ಮ ಸಮುದಾಯದಲ್ಲೇ ಅಪರೂಪದ ಸಾಧನೆಯನ್ನು ಮಗಳು ಮಾಡಿದ್ದಾಳೆ” ಎಂದು ನಾಗಶ್ರೀಯ ತಂದೆ ಜಗದೀಶ ಸಿದ್ದಿ ಹೇಳಿದರು.

ಮೊದಲಿನಿಂದಲೂ ಶಿಕ್ಷಣದಲ್ಲಿ ಮುಂದಿರುವ ನಾಗಶ್ರೀಗೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಮುಂದುವರೆಯುವ ಹೆಬ್ಬಯಕೆ ಇದೆ. ಅಷ್ಟೇ ಅಲ್ಲದೆ, “ಖಂಡಿತ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡುತ್ತೇನೆ” ಎಂಬ ದೃಢ ವಿಶ್ವಾಸವೂ ಇದೆ.

ಈ ಕುವರಿ ಪ್ರತಿಷ್ಠಿತ ಎನ್‌ಎಂಎಂಎಸ್ ಪರೀಕ್ಷೆಯನ್ನೂ ಉತ್ತೀರ್ಣಗೊಂಡು ವಾರ್ಷಿಕ ವಿದ್ಯಾರ್ಥಿವೇತನಕ್ಕೂ ಪಾತ್ರಳಾಗಿದ್ದಾಳೆ. ಗುಡ್ಡಗಾಡು ಸಮುದಾಯದ ಈ ಶಿಕ್ಷಣಾಸಕ್ತಿಗೆ ಸಮಾಜದ ಸಹಾಯ, ಭರವಸೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ.

ಉತ್ತಮ ವಿಜ್ಞಾನ ವಿಭಾಗದ ಶಿಕ್ಷಣ ನೀಡುವ ಹಾಗೂ ಅವಳ ಸಾಧನೆಗೆ ಬೆನ್ನು ತಟ್ಟುವ ಕಾಲೇಜೊಂದು ಬೇಕಿದೆ. ತಂದೆ-ತಾಯಿ ಕೂಲಿ ಮಾಡಿ ಮಗಳ ಶೈಕ್ಷಣಿಕ ಉನ್ನತಿಗಾಗಿ ಬೆವರು ಸುರಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲ ಪ್ರದೇಶದಲ್ಲೇ ಈಕೆಯ ಶಿಕ್ಷಣ ಬೆಳಗಬೇಕು.

ಸಮಾಜದ ಭಾಗವಾದ ನಾವು ನಮ್ಮಿಂದಾದ ಸಹಾಯ, ಭರವಸೆ ಮತ್ತು ಮಾರ್ಗದರ್ಶನ ಮಾಡೋಣ.

ಸಂಪರ್ಕ:
ಜಗದೀಶ ಬೋಳಾ ಸಿದ್ದಿ
ಕಟ್ಟೆಪಾಲ, ಹಳವಳ್ಳಿ, ಅಂಕೋಲ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಮೊ: 87624 60059

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share