ಯಲ್ಲಾಪುರ: ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಗೌರವಯುತ ವಸತಿ ಸೌಲಭ್ಯ ಒದಗಿಸುವುದು ನಮ್ಮ ಸಂಕಲ್ಪ. ಬಡ ಕುಟುಂಬಗಳ ಬದುಕಿನಲ್ಲಿ ನೆಮ್ಮದಿ ಮತ್ತು ಭದ್ರತೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರದ ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಹೆಬ್ಬಾರ್ ನಗರದ ಕಾರ್ಮಿಕ ಭವನದಲ್ಲಿ ಸೋಮವಾರ ನಡೆದ ಜಿ+2 ಮಾದರಿಯ ಮನೆಗಳ ಮೊದಲ ಹಂತದ ಹಂಚಿಕೆ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಹೆಬ್ಬಾರ್ ನಗರದಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅರ್ಹ ಫಲಾನುಭವಿಗಳ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸಲಿವೆ. ಸರ್ಕಾರದ ವಿವಿಧ ವಸತಿ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸುವ ಮೂಲಕ ಪ್ರತಿಯೊಬ್ಬ ಕುಟುಂಬಕ್ಕೂ ಸ್ವಂತ ಮನೆ ಕಲ್ಪಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಸತಿ ರಹಿತ ಬಡ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಮನೆಗಳ ಮೊದಲ ಹಂತದ ಹಂಚಿಕೆ ಕಾರ್ಯಕ್ಕೆ ಇದೇ ಸಂದರ್ಭದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದು, ಮನೆಗಳ ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು.