ಯಲ್ಲಾಪುರ: ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳು ರಾಜಕೀಯ ಹತಾಶೆ ಮತ್ತು ಜವಾಬ್ದಾರಿಯ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು ಹಣ ನೀಡಿ ಖರೀದಿಸಲಾಗಿತ್ತು ಎಂಬ ಈಶ್ವರಪ್ಪ ಅವರ ಆರೋಪವನ್ನು ಸಂಪೂರ್ಣ ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆ ಎಂದು ಖಂಡಿಸಿದ್ದಾರೆ.
ಒಂದು ವೇಳೆ ಆರೋಪದಲ್ಲಿ ಸತ್ಯಾಂಶವಿದ್ದರೆ, ಯಾರು ಹಣ ನೀಡಿದರು, ಯಾರು ಪಡೆದರು, ಎಷ್ಟು ಮೊತ್ತದ ವ್ಯವಹಾರ ನಡೆದಿದೆ ಎಂಬುದನ್ನು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.
ಸಾಕ್ಷ್ಯಾಧಾರಗಳಿಲ್ಲದೆ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಈಶ್ವರಪ್ಪ ಅವರು ತಮ್ಮ ರಾಜಕೀಯ ಹತಾಶೆಯನ್ನು ಪ್ರದರ್ಶಿಸುತ್ತಿದ್ದಾರೆ. ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದರೆ ರಾಜ್ಯದ ಜನರ ಕ್ಷಮೆಯಾಚಿಸಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಹೆಬ್ಬಾರ್ ಆಗ್ರಹಿಸಿದ್ದಾರೆ.
ರಾಜೀನಾಮೆ ನೀಡಿ ರಾಜಕೀಯ ತ್ಯಾಗ ಮಾಡಿದ 17 ಶಾಸಕರ ಬೆಂಬಲದಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅದರ ಫಲಾನುಭವಿಯಾಗಿ ಸಚಿವ ಸ್ಥಾನವನ್ನು ಅನುಭವಿಸಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು. ಈಗ ಅದೇ ಶಾಸಕರ ಬಗ್ಗೆ ಅವಹೇಳನಕಾರಿ ಭಾಷೆಯಲ್ಲಿ ಮಾತನಾಡುತ್ತಿರುವುದು ಕೃತಘ್ನತೆಯ ಪರಮಾವಧಿಯಾಗಿದೆ ಎಂದು ಟೀಕಿಸಿದ್ದಾರೆ.
ತಮ್ಮ ಸಚಿವ ಅವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಹಾಗೂ ಬೆಳಗಾವಿ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಸಂದರ್ಭದ ಜನಾಕ್ರೋಶವನ್ನು ಜನತೆ ಮರೆತಿಲ್ಲ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಈಶ್ವರಪ್ಪ ಅವರು ಆಧಾರರಹಿತ ಹೇಳಿಕೆಗಳ ಮೊರೆ ಹೋಗುತ್ತಿದ್ದಾರೆ ಎಂದು ಹೆಬ್ಬಾರ್ ಆರೋಪಿಸಿದ್ದಾರೆ.
ರಾಜಕೀಯದಲ್ಲಿ ಜವಾಬ್ದಾರಿ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ನೈತಿಕತೆ ಮುಖ್ಯ. ಆದರೆ ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳು ಈ ಮೌಲ್ಯಗಳಿಂದ ಅವರು ದೂರವಾಗಿರುವುದನ್ನು ತೋರಿಸುತ್ತವೆ. ಜನರ ವಿಶ್ವಾಸ ಕಳೆದುಕೊಂಡಿರುವ ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ಇತರರ ಬಗ್ಗೆ ಮಾತನಾಡಲಿ ಎಂದು ಹೆಬ್ಬಾರ್ ತಿರುಗೇಟು ನೀಡಿದ್ದಾರೆ.