ಕುಮಟಾ: ಹೋಟೆಲ್‌ಗೆ ಊಟಕ್ಕೆ ಬಂದ ದಂಪತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಸಮೀಪದ ದೇವಿಕೆರೆ ನಿವಾಸಿ ರಮೇಶ ದ್ಯಾಮಣ್ಣ ಅಲೆಮಾರಿ (62) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ ಅಲೆಮಾರಿ ಹಾಗೂ ಅವರ ಪತ್ನಿ ದ್ಯಾಮವ್ವ ಅವರು ಜೂನ್ 22ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಕುಮಟಾ ಹೊಸ ಬಸ್ ನಿಲ್ದಾಣದ ಎದುರಿನ ಗೋವರ್ಧನ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್ ಮಾಲೀಕ ಗಣೇಶ ನಾರಾಯಣ ನಾಯ್ಕ ಹಾಗೂ ಹೋಟೆಲ್ ವಾಚ್‌ಮನ್ ಗಣೇಶ ರಮೇಶ ಗುರಕಾ ಅವರು ದಂಪತಿಯನ್ನು ಅಡ್ಡಗಟ್ಟಿ, “ನಮ್ಮ ಹೋಟೆಲ್‌ಗೆ ಊಟಕ್ಕೆ ಬರಬೇಡಿ” ಎಂದು ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ಪರಿಣಾಮ ದಂಪತಿ ರಸ್ತೆಗೆ ಬಿದ್ದಿದ್ದು, ಮತ್ತೆ ಹೋಟೆಲ್ ಹತ್ತಿರ ಬಂದರೆ ಕೊಲೆ ಮಾಡಿ ನಾಪತ್ತೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ರಮೇಶ ಅಲೆಮಾರಿ ಅವರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನೀಡಿದ ಹೇಳಿಕೆಯ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.