ಸಿದ್ದಾಪುರ: ಮನೆಯ ಹಿಂಬದಿಯ ಗೋಡೆ ಹತ್ತಿ ಒಳನುಗ್ಗಿದ ಕಳ್ಳರು, ಬೀಗ ಹಾಕಿದ್ದ ಕಪಾಟಿನ ಸೇಫ್ ಲಾಕರ್ ತೆರೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ತಾಲೂಕಿನ ಹೆಜನಿ ಗ್ರಾಮದ ಮಾವಿನಗುಂಡಿಯ ನೀಲಕಂಠ ನಾಯ್ಕ ಅವರ ಮನೆಯಲ್ಲಿ ನಡೆದಿದೆ.
ಅ. 28ರಂದು ಮಧ್ಯಾಹ್ನ 2ರಿಂದ 2.30ರ ನಡುವಿನ ಅವಧಿಯಲ್ಲಿ ಮೂವರು ಅಪರಿಚಿತರು ಮನೆಯ ಹಿಂಬದಿಯ ಗೋಡೆ ಹತ್ತಿ ಒಳಪ್ರವೇಶಿಸಿದ್ದಾರೆ. ಮನೆಯ ಹಾಲ್ನಲ್ಲಿದ್ದ ಗೋದ್ರೇಜ್ ಕಪಾಟಿನ ಬಾಗಿಲನ್ನು ಯಾವುದೋ ವಸ್ತುವಿನಿಂದ ಮೀಟಿ ತೆರೆದಿದ್ದಾರೆ. ಬಳಿಕ ಅದರೊಳಗಿದ್ದ ಸೇಫ್ ಲಾಕರ್ನ ಚಾವಿ ಬಳಸಿ ಲಾಕರ್ ತೆರೆದು ಚಿನ್ನಾಭರಣ ಹಾಗೂ ನಗದು ಹಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಕಳವಾದ ವಸ್ತುಗಳಲ್ಲಿ 35 ಗ್ರಾಂ ತೂಕದ ಚಿನ್ನದ ತಾಳಿ ಸರ, 16 ಗ್ರಾಂ ತೂಕದ ಚಿನ್ನದ ಸರ ಹಾಗೂ 5 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಲಾಕೆಟ್ ಸೇರಿವೆ. ಇವುಗಳ ಒಟ್ಟು ತೂಕ 56 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ರೂ. 6.30 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ರೂ. 4,000 ನಗದು ಹಣವನ್ನೂ ಕಳವು ಮಾಡಲಾಗಿದೆ. ಒಟ್ಟು ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 6.34 ಲಕ್ಷವಾಗಿದೆ.ಮೂವರು ಆರೋಪಿಗಳು ಹಳದಿ ಬಣ್ಣದ ಬೈಕ್ನಲ್ಲಿ ಬಂದಿದ್ದರು ಎನ್ನಲಾಗಿದ್ದು, ಅವರ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.


