ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಆಗಸ್ಟ್ 1ರೊಳಗೆ ಉತ್ತರ ನೀಡಿ, ಇಲ್ಲದಿದ್ದರೆ ಪಾದಯಾತ್ರೆ, ಧರಣಿ: ಅನಂತಮೂರ್ತಿ ಹೆಗಡೆ
ಶಿರಸಿ: ಶಿರಸಿಯ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಕುರಿತು ಕೇಳಿರುವ ಪ್ರಶ್ನೆಗಳಿಗೆ ಆಗಸ್ಟ್ 1ರೊಳಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದಿದ್ದರೆ ಪಾದಯಾತ್ರೆ, ಧರಣಿ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯ ದೀನದಯಾಳ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಅಭಿವೃದ್ಧಿ ಕುರಿತು ಕೇಳಿದ್ದ ಏಳು ಪ್ರಶ್ನೆಗಳಿಗೆ ತಿಂಗಳಾದರೂ ಉತ್ತರ ಸಿಕ್ಕಿಲ್ಲ. ಈ ಮೌನವೇ ಸಮ್ಮತಿಯ ಲಕ್ಷಣವಾಗಿದೆ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲೂ ಆಸ್ಪತ್ರೆಯ ಸಮಸ್ಯೆಗಳನ್ನು ಶಾಸಕರು ಪ್ರಸ್ತಾಪಿಸಿಲ್ಲ. ಆಸ್ಪತ್ರೆ ಕಟ್ಟಡ ಪೂರ್ಣಗೊಂಡು ವರ್ಷ ಕಳೆದರೂ ವೈದ್ಯಕೀಯ ಉಪಕರಣಗಳ ಖರೀದಿಗೆ ಇನ್ನೂ ಪ್ರಸ್ತಾವನೆ ಸಲ್ಲಿಸುತ್ತಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಆರಂಭದಲ್ಲಿ ಸುಮಾರು ₹30 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಯೋಜನೆ ಇದ್ದರೂ, ಅದನ್ನು ₹5.20 ಕೋಟಿಗೆ ಇಳಿಸಲಾಗಿದೆ. ಸಿಟಿ ಸ್ಕ್ಯಾನ್ ಹಾಗೂ ಎಂಆರ್ಐ ಯಂತ್ರಗಳು ಪಟ್ಟಿಯಿಂದ ಕೈಬಿಡಲಾಗಿದೆ. ಇಂತಹ ಪ್ರಮುಖ ಸೌಲಭ್ಯಗಳನ್ನು ತಕ್ಷಣ ಒದಗಿಸಿ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಹಾವು ಕಚ್ಚಿ ಬಾಲಕ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆಸ್ಪತ್ರೆಯಲ್ಲಿ ಸಮಯೋಚಿತ ಚಿಕಿತ್ಸೆ ಸಿಗದ ಬಗ್ಗೆ ಗಂಭೀರ ಆರೋಪಗಳಿದ್ದರೂ ಜನಪ್ರತಿನಿಧಿಗಳು ಪರಿಶೀಲನೆ ನಡೆಸಿಲ್ಲ. ಹೃದಯ ಶಸ್ತ್ರಚಿಕಿತ್ಸೆ, ನ್ಯೂರಾಲಜಿ, ನೆಫ್ರಾಲಜಿ ಸೇರಿದಂತೆ ಎಲ್ಲ ವಿಶೇಷ ಚಿಕಿತ್ಸಾ ಸೌಲಭ್ಯಗಳು ಹಾಗೂ ಅಗತ್ಯ ವೈದ್ಯರ ನೇಮಕಾತಿ ತುರ್ತಾಗಿ ಆಗಬೇಕು ಎಂದರು.
ಆಗಸ್ಟ್ 1ರೊಳಗೆ ಆಸ್ಪತ್ರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ಹಾಗೂ ಅಗತ್ಯ ಕ್ರಮಗಳು ಆರಂಭವಾಗದಿದ್ದರೆ ಪಾದಯಾತ್ರೆ, ಧರಣಿ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಹಳ್ಳಿಹಳ್ಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ಜಾಗೃತಿ ಅಭಿಯಾನ ನಡೆಸುವುದಾಗಿ ಹೇಳಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕಾಂಗ್ರೆಸ್ ಸರ್ಕಾರ ಭರವಸೆಗಳನ್ನಷ್ಟೇ ನೀಡುತ್ತಿದೆ. ಆರೋಗ್ಯದಂತಹ ಮೂಲಭೂತ ಕ್ಷೇತ್ರಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಸುರೇಶ್ ನಾಯ್ಕ ಕಾನಗೋಡ ಮಾತನಾಡಿ, ರಾಜ್ಯದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮುಖಂಡ ನಾರಾಯಣ ಹೆಗಡೆ ಮತ್ತಿಘಟ್ಟಾ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತ ಬಹು ಅಂಗಾಂಗ ವೈಫಲ್ಯದಂತಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಗಾಂವ್ಕರ್, ರಾಘವೇಂದ್ರ ನಾಯ್ಕ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.