ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ನಗರ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿರಸಿ ಕಸ್ತೂರಬಾನಗರ ನಿವಾಸಿ ನೂರಅಹ್ಮದ ತಂದೆ ಖಾಸಿಂಸಾಬ್ ತಿಮ್ಮಾಪುರ ಪ್ರಕರಣದ ಆರೋಪಿ. ಆಗಸ್ಟ್ 27ರಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ಶಿರಸಿ ನಗರದ ಆನೆಹೊಂಡ ಕಚ್ಚಾ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಂಕೆ–ಸಂಖ್ಯೆಗಳ ಮೇಲೆ ಪಂಥ ಕಟ್ಟಿಸಿಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾರಾಯಣ ರಾಠೋಡ (ತನಿಖೆ) ಅವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಆರೋಪಿಯ ಬಳಿಯಲ್ಲಿ ಮಟಕಾ ಜೂಜಾಟಕ್ಕೆ ಬಳಸುತ್ತಿದ್ದ 510 ರೂ ನಗದು, ಓ.ಸಿ. ಅಂಕೆ–ಸಂಖ್ಯೆಗಳನ್ನು ಬರೆದ ಒಂದು ಚೀಟಿ ಹಾಗೂ ಒಂದು ಬಾಲ್ಪೆನ್ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪಿಎಸ್ಐ ನಾರಾಯಣ ರಾಠೋಡ ಅವರು ನೀಡಿದ ದೂರಿನ ಆಧಾರದ ಮೇಲೆ ಮೊದಲು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.