ಕಾನಸೂರಿನಲ್ಲಿ ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ಶಿಕ್ಷಕನ ವಿರುದ್ಧ ಗಂಭೀರ ಆರೋಪ
ಸಿದ್ದಾಪುರ: ಕಾನಸೂರಿನ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕರೊಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಗೋಕುಲ ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತ ದೈಹಿಕ ಹಾಗೂ ಮಾನಸಿಕವಾಗಿ ಸದೃಢನಾಗಿದ್ದ ಎಂದು ತಾಯಿ ಜಯಶ್ರೀ ಕೃಷ್ಣ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಗನ ಕುತ್ತಿಗೆ ಭಾಗದಲ್ಲಿ ಊತ ಕಂಡು ಕಾರಣ ಕೇಳಿದಾಗ, ಆರಂಭದಲ್ಲಿ ಮೌನವಾಗಿದ್ದ ಗೋಕುಲ ನಂತರ ʻಅಬ್ಬು ಸರ್ ಕುತ್ತಿಗೆ ಹಿಡಿದು ಎತ್ತಿರುತ್ತಾರೆʼ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಏಪ್ರಿಲ್ ರಜೆಯಲ್ಲಿ ಮನೆಗೆ ಬಂದಿದ್ದ ವೇಳೆ ಗೋಕುಲ ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ತಾಯಿಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಲೆಯ ಹಿಂದಿ ಶಿಕ್ಷಕರಾದ ಅಬ್ಬು ಸರ್ ಒಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತಾನು ನೋಡಿದ್ದೆ. ಈ ವಿಚಾರವನ್ನು ಯಾರಿಗೂ ಹೇಳದಂತೆ ಶಿಕ್ಷಕರು ಬೆದರಿಕೆ ಹಾಕಿದ್ದು, ಹೇಳಿದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಗೋಕುಲ ತಿಳಿಸಿದ್ದಾನೆ ಎನ್ನಲಾಗಿದೆ.
ಜೂನ್ 9ರಂದು ಶಾಲಾ ಸಿಬ್ಬಂದಿ ನವೀನ್ ಅವರು ಗೋಕುಲನ ತಂದೆಗೆ ಕರೆ ಮಾಡಿ ತುರ್ತಾಗಿ ಶಾಲೆಗೆ ಬರಲು ಸೂಚಿಸಿದ್ದರು. ಬಳಿಕ ಶಿರಸಿ ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಗೋಕುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಕುಟುಂಬಕ್ಕೆ ದೊರೆತಿದೆ.
ಆದರೆ ಮಗನ ಸಾವಿನ ಕುರಿತು ಹಲವು ಅನುಮಾನಗಳಿರುವುದಾಗಿ ತಾಯಿ ಜಯಶ್ರೀ ದೂರಿನಲ್ಲಿ ತಿಳಿಸಿದ್ದಾರೆ. ಶಿಕ್ಷಕರ ಅಸಭ್ಯ ವರ್ತನೆಗೆ ಸಂಬಂಧಿಸಿದ ಮಾಹಿತಿ ಗೋಕುಲನಿಗೆ ಗೊತ್ತಿದ್ದ ಕಾರಣ ಆತನ ಮೇಲೆ ಒತ್ತಡ ಅಥವಾ ಬೆದರಿಕೆ ಇರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯ ದಿನ ಬಿಸ್ಕೆಟ್ ತಿಂದ ವಿಚಾರಕ್ಕೆ ಗೋಕುಲನನ್ನು ಶಿಕ್ಷಕರು ಹೊಡೆದಿದ್ದರು ಎಂಬ ಆರೋಪವೂ ದೂರಿನಲ್ಲಿದೆ.
ಇನ್ನೊಂದೆಡೆ, ಗೋಕುಲ ಸಾವನ್ನಪ್ಪಿದ ವೇಳೆ ವಸತಿ ನಿಲಯದಲ್ಲಿ ವಿದ್ಯುತ್ ಇರಲಿಲ್ಲ ಎಂದು ಶಾಲಾ ಆಡಳಿತ ಹೇಳಿದ್ದರೂ, ಆ ಸಮಯದಲ್ಲಿ ಊರಿನ ಇತರೆಡೆ ವಿದ್ಯುತ್ ಪೂರೈಕೆ ಸಾಮಾನ್ಯವಾಗಿತ್ತು ಎಂದು ತಾಯಿ ಅನುಮಾನ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೋಕುಲನ ಸಾವು ಆತ್ಮಹತ್ಯೆಯಲ್ಲ, ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಜಯಶ್ರೀ, ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಸಿದ್ದಾಪುರ ಪೊಲೀಸರು ಶಿಕ್ಷಕ ಅಬ್ಬು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.