Friday, May 29, 2026
HomeNationalತೂತುಕುಡಿ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ

ತೂತುಕುಡಿ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ

ತಮಿಳುನಾಡು: ತೂತುಕುಡಿ ಜಿಲ್ಲೆಯಲ್ಲಿ ಆರು ವರ್ಷಗಳ ಹಿಂದೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ. ಬೆನಿಕ್ಸ್ ಕಸ್ಟಡಿ ಸಾವು ಪ್ರಕರಣದಲ್ಲಿ, ಮಧುರೈ ಜಿಲ್ಲೆಯ ನ್ಯಾಯಾಲಯವು ಒಂಬತ್ತು ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ.

ಏನಿದು ಘಟನೆ?
ಮೊಬೈಲ್‌ ಫೋನ್‌ ಅಂಗಡಿ ನಡೆಸುತ್ತಿದ್ದ ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಅವರನ್ನು, ಲಾಕ್‌ಡೌನ್ ನಿಯಮ ಉಲ್ಲಂಘನೆ ಆರೋಪದಡಿ 2020ರ ಜೂನ್ 19ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಇದ್ದ ವೇಳೆ ಅವರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜೂನ್ 23ರಂದು ಇಬ್ಬರೂ ಮೃತಪಟ್ಟಿದ್ದರು.

ಕುಟುಂಬದವರು ಹಾಗೂ ಹಲವು ಸಾರ್ವಜನಿಕ ವಲಯಗಳಲ್ಲಿ, ಕಸ್ಟಡಿಯಲ್ಲಿ ನಡೆದ ದೌರ್ಜನ್ಯವೇ ಸಾವಿಗೆ ಕಾರಣ ಎನ್ನುವ ಆರೋಪಗಳು ವ್ಯಕ್ತವಾಗಿದ್ದವು. ಈ ಘಟನೆ ರಾಜ್ಯದಷ್ಟೇ ಅಲ್ಲದೆ ದೇಶಾದ್ಯಂತ ತೀವ್ರ ಪ್ರತಿಕ್ರಿಯೆ ಮೂಡಿಸಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಕೇಂದ್ರ ತನಿಖಾ ದಳ (CBI)ಗೆ ವಹಿಸಲಾಗಿತ್ತು.

ತನಿಖೆಯಲ್ಲಿ, ಅಂದಿನ ಇನ್ಸ್‌ಪೆಕ್ಟರ್ ಸೇರಿದಂತೆ ಕೆಲವು ಸಬ್‌-ಇನ್ಸ್‌ಪೆಕ್ಟರ್‌ಗಳು ಹಾಗೂ ಇತರ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದವೆಂದು ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿಗಳು ಮಧುರೈ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

ಶಿಕ್ಷೆ ಘೋಷಿಸುವ ಮುನ್ನ ನ್ಯಾಯಾಲಯವು ಆರೋಪಿಗಳು ಹಾಗೂ ಮೃತರ ಕುಟುಂಬದವರ ವಾದಗಳನ್ನು ಆಲಿಸಿತು. ಈ ವೇಳೆ ಜಯರಾಜ್ ಅವರ ಪತ್ನಿ ಸೆಲ್ವರಾಣಿ, ತಮ್ಮ ಗಂಡ ಮತ್ತು ಮಗ ನಿರಪರಾಧಿಗಳಾಗಿದ್ದು, ಅವರಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿನಿಂದ ಮನವಿ ಮಾಡಿಕೊಂಡರು.

ಇನ್ನೊಂದೆಡೆ, ಆರೋಪಿಗಳು ತಮ್ಮ ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ದಯೆ ತೋರಿಸುವಂತೆ ಕೋರಿದರೆ, ಸಿಬಿಐ ಪರ ವಕೀಲರು ಇದು ಅತ್ಯಂತ ಗಂಭೀರ ಹಾಗೂ ಅಪರೂಪದ ಪ್ರಕರಣವಾಗಿದ್ದು, ಗರಿಷ್ಠ ಶಿಕ್ಷೆ ವಿಧಿಸುವುದು ಸೂಕ್ತ ಎಂದು ವಾದಿಸಿದರು.

ಎಲ್ಲಾ ವಾದಗಳನ್ನು ಪರಿಗಣಿಸಿದ ಬಳಿಕ, ನ್ಯಾಯಾಲಯವು ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ದೋಷಿಗಳೆಂದು ಪರಿಗಣಿಸಿ ಮರಣದಂಡನೆ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share