Friday, July 24, 2026
Join WhatsApp Group
HomeStateಅಜ್ಜನ ಜೀವ ಉಳಿಸಿದ ಗ್ಯಾಸ್ ಓಟಿಪಿ!

ಅಜ್ಜನ ಜೀವ ಉಳಿಸಿದ ಗ್ಯಾಸ್ ಓಟಿಪಿ!

ಉಡುಪಿಯಲ್ಲೊಂದು ಅಪರೂಪದ ಘಟನೆ

ಉಡುಪಿ: “ಸಾಯುವವನಿಗೆ ಹುಲ್ಲು ಕಡ್ಡಿ ಕೂಡ ಆಸರೆ” ಎಂಬ ಗಾದೆ ಮಾತು ಇಲ್ಲಿ ಅಕ್ಷರಶಃ ನಿಜವಾದಂತಾಗಿದೆ. ಆದರೆ ಇಲ್ಲಿ ಹುಲ್ಲು ಕಡ್ಡಿಯ ಬದಲು ಗ್ಯಾಸ್ ಸಿಲಿಂಡರ್ ವಿತರಣೆಗೆ ಬಂದ ಓಟಿಪಿ (OTP) ವೃದ್ಧರೊಬ್ಬರ ಜೀವ ಉಳಿಸಲು ಕಾರಣವಾಗಿದೆ ಎನ್ನುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ನಗರದ ಕೊಡವೂರು ವಾರ್ಡ್‌ನ ಕಂಬ್ಳಕಟ್ಟದ ನಿರ್ಜನ ಪ್ರದೇಶದ ಮನೆಯಲ್ಲಿ ವಾಸವಿದ್ದ ಶ್ರೀನಿವಾಸ ಆಚಾರ್ಯ (62) ಅವರು ಈ ಘಟನೆಯಲ್ಲಿ ಬದುಕುಳಿದವರಾಗಿದ್ದಾರೆ. ಒಂಟಿಯಾಗಿ ವಾಸವಿದ್ದ ಅವರು, ತೋಟಕ್ಕೆ ನೀರು ಹಾಯಿಸಲು ಹೋಗಿ ಬಾವಿಯ ಪೈಪ್ ದುರಸ್ತಿ ಮಾಡುವ ವೇಳೆ ಆಯತಪ್ಪಿ ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.

ಸುತ್ತಮುತ್ತ ಯಾರೂ ಇಲ್ಲದ ಕಾರಣ, ಅವರ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ. ಸುಮಾರು ಮೂರು ದಿನಗಳ ಕಾಲ ಅವರು ಬಾವಿಯೊಳಗೆ ಪೈಪ್ ಹಿಡಿದುಕೊಂಡೇ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ್ದರು.

ಇದೇ ವೇಳೆ, ಅವರು ಮೊದಲೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದ ಹಿನ್ನೆಲೆ, ವಿತರಣೆಗೆ ಬಂದ ಸಿಬ್ಬಂದಿಗೆ ಓಟಿಪಿ ಅಗತ್ಯವಾಯಿತು. ಮನೆಯಲ್ಲಿ ಯಾರೂ ಇಲ್ಲದಿರುವುದು ಗಮನಕ್ಕೆ ಬಂದು, ಈ ಬಗ್ಗೆ ವಿಚಾರಣೆ ನಡೆಸಿದಾಗ, ಶ್ರೀನಿವಾಸ ಅವರ ಪರಿಚಯಸ್ಥ ಗಣೇಶ್ ಅವರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ತೋಟದ ಬಾವಿಯೊಳಗೆ ಅವರು ಬಿದ್ದಿರುವುದು ಪತ್ತೆಯಾಗಿದೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಅವರನ್ನು ಮೇಲಕ್ಕೆ ಎತ್ತಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಗ್ಯಾಸ್ ವಿತರಣೆಯ ಓಟಿಪಿ ವಿಚಾರವೇ ಈ ಘಟನೆಯಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿದ್ದು, ಸಮಯೋಚಿತ ಕ್ರಮದಿಂದ ವೃದ್ಧರ ಜೀವ ಉಳಿದಿರುವುದು ಗಮನಾರ್ಹವಾಗಿದೆ. ಈ ಘಟನೆ ಸ್ಥಳೀಯರ ಗಮನ ಸೆಳೆದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share