ಯಲ್ಲಾಪುರ: ತಾಲೂಕಿನ ಹಿರಿಯ ಅಡಿಕೆ ವರ್ತಕ ಉಮೇಶ ಭಟ್ಟ ಅವರ ನಿಧನದ ಬಳಿಕ ನಡೆದ ಶ್ರದ್ಧಾಂಜಲಿ ಸಭೆ ವಿಭಿನ್ನ ರೀತಿಯಲ್ಲಿ ಗಮನ ಸೆಳೆದಿದೆ. ಸಾಮಾನ್ಯವಾಗಿ ದುಃಖದ ವಾತಾವರಣ, ಕಣ್ಣೀರಿನ ನಡುವೆಯೇ ನಡೆಯುವ ಶ್ರದ್ಧಾಂಜಲಿ ಸಭೆ, ಈ ಬಾರಿ ಉಮೇಶ ಭಟ್ಟ ಅವರ ಜೀವನೋತ್ಸಾಹದ ನೆನಪಿನಿಂದ ನಗು-ಸಂತಸದ ಕ್ಷಣಗಳಿಗೂ ಸಾಕ್ಷಿಯಾಯಿತು.
ಕುಮಟಾ ಮೂಲದ ಉಮೇಶ ಭಟ್ಟ ಅವರು ಯಲ್ಲಾಪುರಕ್ಕೆ ಬಂದು ಅಡಿಕೆ ವ್ಯವಹಾರದಲ್ಲಿ ತಮ್ಮದೇ ಆದ ಹೆಸರನ್ನು ಸಂಪಾದಿಸಿದವರು. ಅನೇಕ ಅಡಿಕೆ ವ್ಯಾಪಾರಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು, ಬಡತನದಿಂದಲೇ ಬದುಕು ಆರಂಭಿಸಿ ಸೈಕಲ್‌ನಲ್ಲಿ ಸಂಚರಿಸುತ್ತಾ ವ್ಯಾಪಾರ ಬೆಳೆಸಿದವರು. 73 ವರ್ಷ ವಯಸ್ಸಾದರೂ ಅವರ ಜೀವನೋತ್ಸಾಹ, ಹಾಸ್ಯಪ್ರಜ್ಞೆ ಮತ್ತು ಲವಲವಿಕೆ ಕಡಿಮೆಯಾಗಿರಲಿಲ್ಲ ಎಂದು ಆಪ್ತರು ಸ್ಮರಿಸಿದರು.
ಮೇ 19ರಂದು ಉಮೇಶ ಭಟ್ಟ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 20ರಂದು ಎಪಿಎಂಸಿ ಬಳಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಡಿಕೆ ವ್ಯಾಪಾರಿಗಳು ಶ್ರದ್ಧಾಂಜಲಿ ಸಭೆ ಆಯೋಜಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾತನಾಡಿದ ಆಪ್ತರು, ಉಮೇಶ ಭಟ್ಟ ಅವರ ಜೀವನದ ಘಟನೆಗಳು ಹಾಗೂ ಅವರ ನವಿರಾದ ಹಾಸ್ಯಪ್ರಜ್ಞೆಯನ್ನು ನೆನೆದು ಹಲವು ಪ್ರಸಂಗಗಳನ್ನು ಹಂಚಿಕೊಂಡರು. ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದವರು ಉಮೇಶ ಭಟ್ಟರ ಅಗಲುವಿಕೆಯ ದುಃಖ ಮರೆತು ನಗುವಿನಲ್ಲೇ ಅವರನ್ನು ಸ್ಮರಿಸಿದರು.
ಒಟ್ಟಾರೆ, ಉಮೇಶ ಭಟ್ಟ ಅವರು ಬದುಕಿನಲ್ಲಿದ್ದಾಗ ಹಂಚಿದ ಸಂತಸದ ನೆನಪುಗಳನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುವಂತಾಯಿತು.