ಶಿರಸಿ: ಕಳೆದ ಮೂರು ದಶಕಗಳಿಂದ ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಗ್ರ ವಿಕಾಸ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಉಮಾಪತಿ ಭಟ್ ಕೆ.ವಿ ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕಜೀವವೈವಿಧ್ಯಪ್ರಶಸ್ತಿ ಘೋಷಿಸಲಾಗಿದೆ.
ಮೇ. 22ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ವಿಶ್ವ ಜೀವ ವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಉಮಾಪತಿ ಭಟ್ ಅವರು ಯುವಕರಿಗಾಗಿ ಪರಿಸರ ಪ್ರಶಿಕ್ಷಣ, ಮಕ್ಕಳಿಗಾಗಿ ಹಸಿರು ಪಯಣ, ನಿಸರ್ಗ ಜ್ಞಾನ ಶಿಕ್ಷಣ, ಟೆರೇಸ್ ಗಾರ್ಡನ್ ತರಬೇತಿ, ಪಕ್ಷಿ ವೀಕ್ಷಣೆ, ಜೀವವೈವಿಧ್ಯ ತರಬೇತಿ, ಹಸಿರು ಆಹಾರ-ಹಸಿರು ಆರೋಗ್ಯ ಹಾಗೂ ಮನೆಮದ್ದು ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇದೇ ವೇಳೆ 140ಕ್ಕೂ ಹೆಚ್ಚು ಕಡೆಗಳಲ್ಲಿ ನವಗ್ರಹ ವನ ನಿರ್ಮಾಣ ಮಾಡಿರುವ ಅವರು ಸಂಗೀತ ಸ್ವರವನ, ತೀರ್ಥಂಕರ ವನ, ಕುಟುಂಬ ವನ, ಅಶೋಕವನ, ಅಕ್ಷರ ವನ ಹಾಗೂ ಶ್ರೀ ಮಾರಿಕಾಂಬಾ ವನ ನಿರ್ಮಾಣದಲ್ಲಿಯೂ ವಿಶೇಷ ಸಾಧನೆ ಮಾಡಿದ್ದಾರೆ.
‘ಭೂಮಿ ಉಳಿಸಿ’ ಆಂದೋಲನದ ಮೂಲಕ ಜೌಗುಭೂಮಿ ಮತ್ತು ದೇವರಕಾಡುಗಳ ಸಂರಕ್ಷಣೆಗೆ ಸಹ ಕಾರ್ಯನಿರ್ವಹಿಸಿರುವ ಉಮಾಪತಿ ಭಟ್, ಕೊಡ್ನಗದ್ದೆ, ಕಾನಸೂರು, ಬನವಾಸಿ, ಅಂಡಗಿ, ಬಾಶಿ, ದೊಡ್ಡಮನೆ, ಬದನಗೋಡ, ಗುಡ್ನಾಪುರ ಹಾಗೂ ಶಿರಸಿ ನಗರ ಪ್ರದೇಶಗಳ ಜೀವವೈವಿಧ್ಯ ದಾಖಲಾತಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.