ಶಿರಸಿ: ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಮಾನಸಿಕವಾಗಿ ಚಿಂತೆಯಲ್ಲಿದ್ದ ಯುವಕನೊಬ್ಬ ವಿಷಕಾರಿ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃ_ತಪಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ.
ಶಿರಸಿ ನಗರದ ಕರೆಗುಂಡಿ ರಸ್ತೆ, ಹನುಮಗಿರಿ 13ನೇ ಕ್ರಾಸ್ ನಿವಾಸಿ ಸಲ್ಮಾನ್ ಫಯಾಜ್ ಬೇಗ್ (31) ಮೃತಪಟ್ಟವರು.
ಸಲ್ಮಾನ್ ಅವರು ಸಾಲದ ವಿಚಾರವಾಗಿ ಚಿಂತೆಯಲ್ಲಿದ್ದರು. ಆಗ ಕುಟುಂಬದವರು ಬುದ್ಧಿಮಾತು ಹೇಳಿದ್ದರಿಂದ ಮತ್ತಷ್ಟು ಚಿಂತೆಗೆ ಒಳಗಾಗಿದ್ದ ಅವರು ಆಗಸ್ಟ್ 15ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಯಾವುದೋ ವಿಷಕಾರಿ ಪದಾರ್ಥ ಸೇವಿಸಿಬಿಟ್ಟಿದ್ದರು.
ಅಸ್ವಸ್ಥಗೊಂಡ ಅವರನ್ನು ತಕ್ಷಣ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎನಪೊಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 18ರಂದು ಸಂಜೆ ಸುಮಾರು 7.15ಕ್ಕೆ ಮೃ_ತಪಟ್ಟಿದ್ದಾರೆ.
ಮೃತರ ತಂದೆ ಫಯಾಜ್ ಮೈದ್ದಿನ್ ಬೇಗ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ತಮ್ಮ ಮಗನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.