ಕಾರವಾರ: ಕರ್ತವ್ಯವೆಂದರೆ ಕೇವಲ ಸಮವಸ್ತ್ರ ಧರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ. ತಂತ್ರಜ್ಞಾನ, ತನಿಖಾ ಕೌಶಲ್ಯ, ಛಾಯಾಗ್ರಹಣದಿಂದ ಹಿಡಿದು ಸ್ಫೋಟಕ ವಿರೋಧಿ ತಪಾಸಣೆಯವರೆಗೂ ಹಲವು ಕ್ಷೇತ್ರಗಳಲ್ಲಿ ಪರಿಣತಿ ಅಗತ್ಯ. ಇದಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸರ ನಾಲ್ವರು ಸಿಬ್ಬಂದಿ ಮಣಿಪಾಲದಲ್ಲಿ ನಡೆದ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ತಮ್ಮ ಪ್ರತಿಭೆಯ ಮೂಲಕ ಸಾಕ್ಷಿಯಾಗಿದ್ದಾರೆ.
ಕೆ.ಎಂ.ಸಿ., ಮಣಿಪಾಲ, ಉಡುಪಿಯಲ್ಲಿ ನಡೆದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–2026ರಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸಿದ ನಾಲ್ವರು ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ರೋನಿ ಅಲ್ಮೇಡಾ ಅವರು Computer Awareness ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾರವಾರ ಡಿ.ಎ.ಆರ್.ನ ಸಿಬ್ಬಂದಿ ಲಕ್ಷ್ಮಣ ಲಮಾಣಿ ಅವರು Police Photography/Videography ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಾರವಾರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸತ್ಯಾನಂದ ಅವರು Scientific Aids to Investigation ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾರವಾರ ಡಿ.ಎ.ಆರ್.ನ ಈರಣ್ಣ ಕೆಳಗಿನಮನಿ ಅವರು Anti Sabotage Check ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ಪದಕಗಳನ್ನು ಗಳಿಸಿ ಕರ್ತವ್ಯನಿಷ್ಠೆ, ವೃತ್ತಿಪರ ಕೌಶಲ್ಯ ಹಾಗೂ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.