Monday, September 7, 2026
Join WhatsApp Group
HomeLocal Newsಕೆಪಿಎಸ್‌ಸಿ ಹಗರಣ; ‘ಕಾಕ್ರೋಚ್’ಗಳು ಎಲ್ಲಿದ್ದಾರೆ?

ಕೆಪಿಎಸ್‌ಸಿ ಹಗರಣ; ‘ಕಾಕ್ರೋಚ್’ಗಳು ಎಲ್ಲಿದ್ದಾರೆ?

ಯಲ್ಲಾಪುರ: ತಪ್ಪು ಯಾರದ್ದೇ ಆಗಿರಲಿ, ನೀಟ್ ಪರೀಕ್ಷಾ ಹಗರಣದಿಂದ ಅಮಾಯಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಂತೂ ಸುಳ್ಳಲ್ಲ. ವಿದ್ಯಾರ್ಥಿಗಳ ಪರವಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ ‘ಕಾಕ್ರೋಚ’ಗಳು ಇದೀಗ ಕರ್ನಾಟಕದಲ್ಲಿ ನಡೆದಿರುವ ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ವಿಚಾರದಲ್ಲಿ ಎಲ್ಲಿದ್ದಾರೆ? ಎಂದು ಯಲ್ಲಾಪುರದ ನಾಗರಿಕ ವೇದಿಕೆಯ ರಾಮು ನಾಯ್ಕ ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನೀಟ್ ಪರೀಕ್ಷಾ ಅಕ್ರಮದಿಂದ ಅನೇಕ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ದೆಹಲಿಯಲ್ಲಿ ಸತತ 22 ದಿನಗಳ ಕಾಲ ನಡೆದ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ಬೆಂಬಲ ನೀಡಿದ್ದರು. ವಿದ್ಯಾರ್ಥಿಗಳಿಗೆ ನ್ಯಾಯಕ್ಕಾಗಿ ಹೋರಾಟಗಳು ನಡೆದಿದ್ದವು.ಕರ್ನಾಟಕದಲ್ಲಿಯೂ ಕೆಪಿಎಸ್‌ಸಿ ಪರೀಕ್ಷಾ ಹಗರಣ ನಡೆದಿದೆ. ಬಗೆದಷ್ಟೂ ಹೊಸ ಹೊಸ ಕರ್ಮಕಾಂಡಗಳು ಬೆಳಕಿಗೆ ಬರುತ್ತಿವೆ.

ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳು ಇಲ್ಲಿಯೂ ಚಳವಳಿ ಆರಂಭಿಸಿದ್ದಾರೆ. ವಿರೋಧ ಪಕ್ಷಗಳೂ ಹೋರಾಟಕ್ಕೆ ಇಳಿದಿವೆ. ಆದರೆ ದೆಹಲಿಯಲ್ಲಿ ವಿದ್ಯಾರ್ಥಿಗಳ ಪರವಾಗಿ ಉಗ್ರ ಪ್ರತಿಭಟನೆ ನಡೆಸಿದ್ದವರು ಕರ್ನಾಟಕದಲ್ಲಿ ಕಾಣಿಸುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದ ನಾಯಕರು, ಹೋರಾಟಗಾರರು ಹಾಗೂ ಚಿತ್ರರಂಗದ ಪ್ರಮುಖರು ಈಗ ಕರ್ನಾಟಕದ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಏಕೆ ಮೌನವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಮು ನಾಯ್ಕ ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ, ಸೋನಮ್ ವಾಂಗ್ಚುಕ್, ಅರುಂಧತಿ ರಾಯ್ ಸೇರಿದಂತೆ ದೆಹಲಿಯಲ್ಲಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದವರು ಕರ್ನಾಟಕದ ಸಚಿವರ ರಾಜೀನಾಮೆ ಕೇಳುವುದು ಯಾವಾಗ? ಬೆಂಗಳೂರಿನಲ್ಲಿಯೇ ಇರುವ ನಟ ಪ್ರಕಾಶ್ ರಾಜ್, ಅಹಿಂಸಾ ಚೇತನ್ ಅವರಿಗೆ ವಿದ್ಯಾರ್ಥಿಗಳ ಆಕ್ರಂದನ ಕೇಳಿಸುತ್ತಿಲ್ಲವೇ? ಕಣ್ಣು, ಕಿವಿ, ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಕುಳಿತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳ ಸಮಸ್ಯೆ ಯಾವುದೇ ಪಕ್ಷದ ಪರ ಅಥವಾ ವಿರೋಧದ ವಿಚಾರವಾಗಬಾರದು. ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರು ಸರ್ಕಾರ ಬದಲಾದರೂ ಅದೇ ನಿಲುವನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share