Friday, October 23, 2026
HomeLocal Newsರಿಂಗ್ ರೋಡ್ ಭೂತ; ಮನೆ, ಜಮೀನು ಕಳೆದುಕೊಳ್ಳುವ ಆತಂಕ!

ರಿಂಗ್ ರೋಡ್ ಭೂತ; ಮನೆ, ಜಮೀನು ಕಳೆದುಕೊಳ್ಳುವ ಆತಂಕ!

ಕಾರವಾರ: ಜಿಲ್ಲೆಯ ಅಂಕೋಲಾ, ಮುಂಡಗೋಡು, ಯಲ್ಲಾಪುರ, ಜಾಲಿ ಹಾಗೂ ಮಂಕಿ ಪಟ್ಟಣಗಳಲ್ಲಿ ರಿಂಗ್ ರೋಡ್ ನಿರ್ಮಿಸುವ ಉದ್ದೇಶದಿಂದ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದ್ದು, ಪ್ರಸ್ತಾವಿತ ರಸ್ತೆಯ ವ್ಯಾಪ್ತಿಗೆ ಮನೆ, ಜಮೀನು ಹಾಗೂ ಅರಣ್ಯ ಪ್ರದೇಶಗಳು ಒಳಪಡುವ ಸಾಧ್ಯತೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ರಾಜ್ಯದ 108 ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ‘ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್’ ಅಡಿಯಲ್ಲಿ ಈ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಜಿಐಎಸ್ ಆಧಾರಿತ ನಕ್ಷೆಯ ಮೂಲಕ ಪಟ್ಟಣಗಳ ಸುತ್ತ ರಿಂಗ್‌ ರೋಡ್ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಹೊರವಲಯದ ಸಂಪರ್ಕ ಸುಧಾರಿಸುವುದು ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶವೆಂದು ತಿಳಿಸಲಾಗಿದೆ.

ಯೋಜನೆಯ ಪ್ರಕಾರ, ಆಯ್ಕೆಯಾದ ಪಟ್ಟಣಗಳ ಸುತ್ತ ಸುಮಾರು 30 ಮೀಟರ್ ಅಗಲದ, ಅಂದರೆ 100 ಅಡಿ ಅಗಲದ ರಿಂಗ್‌ ರೋಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ಎರಡೂ ಬದಿಗಳಲ್ಲಿ ತಲಾ ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ‘ಇಂಪ್ಯಾಕ್ಟ್ ಝೋನ್’ ಎಂದು ಗುರುತಿಸಿ, ಆ ಪ್ರದೇಶದಲ್ಲಿ ಯೋಜನಾಬದ್ಧ ನಗರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ.

ಆದರೆ, ಉತ್ತರ ಕನ್ನಡ ಜಿಲ್ಲೆಯ ಐದು ಪಟ್ಟಣಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ನಕ್ಷೆಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಪ್ರಸ್ತಾವಿತ ಮಾರ್ಗವು ಕೆಲವೆಡೆ ಈಗಿರುವ ರಸ್ತೆಗಳನ್ನು ಹೊರತುಪಡಿಸಿ ಹೊಸ ಪ್ರದೇಶಗಳ ಮೂಲಕ ಹಾದುಹೋಗುವಂತೆ ರೂಪಿಸಲಾಗಿದೆ. ಇದರಿಂದ ಅನೇಕ ಕುಟುಂಬಗಳ ಮನೆ, ಕೃಷಿ ಭೂಮಿ ಹಾಗೂ ಇತರ ಆಸ್ತಿಗಳು ರಸ್ತೆ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ಕಡೆ ಅರಣ್ಯ ಪ್ರದೇಶಗಳೂ ಯೋಜನೆಯ ವ್ಯಾಪ್ತಿಗೆ ಬರುವ ಆತಂಕ ವ್ಯಕ್ತವಾಗಿದೆ.

ಸ್ಥಳೀಯ ಪರಿಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸದೆ ನಕ್ಷೆ ಸಿದ್ಧಪಡಿಸಲಾಗಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ. ಪ್ರಸ್ತಾವಿತ ಮಾರ್ಗದಿಂದ ಯಾರ್ಯಾರಿಗೆ ಎಷ್ಟು ಪ್ರಮಾಣದ ಭೂಮಿ ಕಳೆದುಕೊಳ್ಳುವ ಸಾಧ್ಯತೆಯಿದೆ, ಎಷ್ಟು ಮನೆಗಳಿಗೆ ತೊಂದರೆಯಾಗಬಹುದು ಹಾಗೂ ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆದಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ನಕ್ಷೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಬಾಧಿತರಾಗುವ ಸಾಧ್ಯತೆಯಿರುವವರು ಯೋಜನೆಯ ವಿವರಗಳನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯ ಸಲ್ಲಿಸಬಹುದಾಗಿದೆ.

ಇನ್ನೊಂದೆಡೆ, ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಈಗಿರುವ ರಸ್ತೆಗಳ ಸ್ಥಿತಿಯೇ ಸಮರ್ಪಕವಾಗಿಲ್ಲ ಎಂಬ ಅಸಮಾಧಾನವೂ ಇದೆ. ರಸ್ತೆಗಳ ಗುಂಡಿ ಮುಚ್ಚುವುದು, ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸುವುದು ಹಾಗೂ ಗ್ರಾಮೀಣ ಭಾಗಗಳ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ಮೊದಲ ಆದ್ಯತೆಯಾಗಬೇಕು ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ‌

ಈಗಿರುವ ರಸ್ತೆ ವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸದೆ, ಹೊಸ ರಸ್ತೆಗಾಗಿ ಮತ್ತೆ ಭೂಸ್ವಾಧೀನಕ್ಕೆ ಮುಂದಾಗುವುದು ಎಷ್ಟು ಸೂಕ್ತ ಎಂಬ ಚರ್ಚೆಯೂ ನಡೆಯುತ್ತಿದೆ.

ರಿಂಗ್ ರೋಡ್ ಯೋಜನೆಯ ಮೂಲಕ ಪಟ್ಟಣಗಳ ಸಂಚಾರ ವ್ಯವಸ್ಥೆ ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದ್ದರೂ, ಅದರ ಅನುಷ್ಠಾನದಲ್ಲಿ ಸ್ಥಳೀಯರ ಬದುಕು, ಕೃಷಿ ಭೂಮಿ, ಮನೆಗಳು ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಪರಿಗಣಿಸುವುದು ಮುಖ್ಯವಾಗಿದೆ.

ಈಗಾಗಲೇ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ನೀಡಿರುವ ಗ್ರಾಮೀಣ ಜನರು ಮತ್ತೊಂದು ಯೋಜನೆಗಾಗಿ ಭೂಮಿ ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದೆಂಬ ಆತಂಕದಲ್ಲಿದ್ದಾರೆ.

ಹೀಗಾಗಿ, ಅಂಕೋಲಾ, ಮುಂಡಗೋಡು, ಯಲ್ಲಾಪುರ, ಜಾಲಿ ಹಾಗೂ ಮಂಕಿ ಪಟ್ಟಣಗಳ ಪ್ರಸ್ತಾವಿತ ರಿಂಗ್ ರೋಡ್ ಯೋಜನೆಯಲ್ಲಿ ಸ್ಥಳ ಪರಿಶೀಲನೆ, ಪರ್ಯಾಯ ಮಾರ್ಗಗಳ ಸಾಧ್ಯತೆ, ಭೂಸ್ವಾಧೀನದ ಅಗತ್ಯ ಮತ್ತು ಪರಿಸರದ ಮೇಲಿನ ಪರಿಣಾಮಗಳ ಕುರಿತು ಸ್ಪಷ್ಟತೆ ಮೂಡಿಸುವುದು ಅಗತ್ಯವಾಗಿದೆ. ಯೋಜನೆಯ ಅಂತಿಮ ರೂಪ ನೀಡುವ ಮೊದಲು ಸ್ಥಳೀಯರ ಆಕ್ಷೇಪಣೆ ಹಾಗೂ ಸಲಹೆಗಳಿಗೆ ಎಷ್ಟು ಮಹತ್ವ ನೀಡಲಾಗುತ್ತದೆ ಎಂಬುದು ಈಗ ಗಮನ ಸೆಳೆದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share