Friday, July 24, 2026
Join WhatsApp Group
HomeLocal NewsSIR ಫಾರ್ಮ್ ಗೊಂದಲವಿದ್ದರೆ ಒಂದು ಕರೆ ಮಾಡಿ

SIR ಫಾರ್ಮ್ ಗೊಂದಲವಿದ್ದರೆ ಒಂದು ಕರೆ ಮಾಡಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಕಾರ್ಯ ವೇಗವಾಗಿ ಸಾಗುತ್ತಿದ್ದು, ಎನ್ಯುಮರೇಷನ್ ಫಾರ್ಮ್‌ಗಳ ವಿತರಣೆಯಲ್ಲಿ ಶೇ.99ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ.

ಫಾರ್ಮ್ ಭರ್ತಿ ಮಾಡುವಲ್ಲಿ ಯಾವುದೇ ಗೊಂದಲಗಳಿದ್ದರೆ ಮತದಾರರು ಉಚಿತ ಸಹಾಯವಾಣಿ ಸಂಖ್ಯೆ 1950 (ಜಿಲ್ಲಾ ಕೋಡ್: 08382)ಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಫಾರ್ಮ್ ಭರ್ತಿಗೆ ನೆರವಾಗುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಬೇರೆಡೆಗೆ ವಲಸೆ ಹೋಗಿರುವವರ ಮನೆಗಳಿಗೂ ಫಾರ್ಮ್‌ಗಳನ್ನು ತಲುಪಿಸಲಾಗಿದೆ. ಇಂತಹ ಮತದಾರರು ಆನ್‌ಲೈನ್ ಮೂಲಕವೂ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯವಿದ್ದರೆ ಹೆಸರು ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶವಿದ್ದು, ಫಾರ್ಮ್ ಪಡೆದ ಪ್ರತಿಯೊಬ್ಬ ಮತದಾರರೂ ಅದನ್ನು ಭರ್ತಿ ಮಾಡಿ ಹಿಂತಿರುಗಿಸುವುದು ಕಡ್ಡಾಯ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ವರದಿಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿಯಮಿತವಾಗಿ ನೀಡಲಾಗುತ್ತಿದೆ. ಮನೆ ಮನೆ ಭೇಟಿ ವೇಳೆ ಪತ್ತೆಯಾಗಿರುವ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ವಿವರಗಳನ್ನು ಆಯಾ ಪಕ್ಷಗಳ ಬೂತ್ ಮಟ್ಟದ ಏಜೆಂಟರು (BLA) ಪರಿಶೀಲಿಸಿ, ಯಾವುದೇ ಗೊಂದಲಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭುಶೆಟ್ಟಿ, ಸಿಪಿಐ(ಎಂ)ನ ಶಾಂತಾರಾಮ ನಾಯ್ಕ, ಯಮುನಾ ಗಾಂವಕರ್, ಬಿಜೆಪಿಯ ಎನ್.ಎಸ್. ಹೆಗಡೆ, ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ, ಉದಯ ಭೋವಿ ಹಾಗೂ ಚುನಾವಣಾ ಶಾಖೆಯ ಶಿರಸ್ತೇದಾರ್ ಶೇಖ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share