Friday, July 24, 2026
Join WhatsApp Group
HomeLocal Newsಯಲ್ಲಾಪುರಕ್ಕೂ ಬೇಕು ಟ್ರೋಮಾ ಸೆಂಟರ್

ಯಲ್ಲಾಪುರಕ್ಕೂ ಬೇಕು ಟ್ರೋಮಾ ಸೆಂಟರ್

ಜನಪ್ರತಿನಿಧಿಗಳು ತ್ರಿವಿಕ್ರಮನಾಗಲಿ: ರಾಮು ನಾಯ್ಕ ಆಗ್ರಹ

ಯಲ್ಲಾಪುರ: ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ ಆರಂಭಿಸಲು ನಿರಂತರ ಪ್ರಯತ್ನ ನಡೆಸಿದ ಶಾಸಕ ದಿನಕರ ಶೆಟ್ಟಿಯವರನ್ನು ಅಭಿನಂದಿಸಿರುವ ಯಲ್ಲಾಪುರ ನಾಗರಿಕ ವೇದಿಕೆ, ಇದೇ ಮಾದರಿಯಲ್ಲಿ ಯಲ್ಲಾಪುರ ತಾಲೂಕಿಗೂ ಟ್ರೋಮಾ ಸೆಂಟರ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದೆ.

ಈ ಕುರಿತು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾಧ್ಯಮ ಪ್ರಕಟಣೆ ನೀಡಿದ್ದು, ಅರಬೈಲ ಘಟ್ಟ ಸೇರಿದಂತೆ ಅಪಘಾತಗಳು ಹೆಚ್ಚಾಗಿ ಸಂಭವಿಸುವ ಪ್ರದೇಶಗಳನ್ನು ಹೊಂದಿರುವ ಯಲ್ಲಾಪುರ ತಾಲೂಕಿಗೆ ಹಲವು ದಶಕಗಳಿಂದ ಟ್ರೋಮಾ ಸೆಂಟರ್‌ ಅಗತ್ಯವಿದೆ ಎಂದು ಹೇಳಿದ್ದಾರೆ.

ಟ್ರೋಮಾ ಸೆಂಟರ್ ಎಂದರೆ ರಸ್ತೆ ಅಪಘಾತ, ಮರ ಬೀಳುವುದು, ಗುಡ್ಡ ಕುಸಿತ, ಕಾಡುಪ್ರಾಣಿಗಳ ದಾಳಿ, ಹಾವು ಕಡಿತ ಸೇರಿದಂತೆ ತುರ್ತು ವೈದ್ಯಕೀಯ ನೆರವು ಅಗತ್ಯವಿರುವ ಪ್ರಕರಣಗಳಿಗೆ 24×7 ಸೇವೆ ಒದಗಿಸುವ ಆಸ್ಪತ್ರೆಯಾಗಿದ್ದು, ಇಲ್ಲಿ ನುರಿತ ವೈದ್ಯರು, ಅಗತ್ಯ ಸಿಬ್ಬಂದಿ, ಆಂಬುಲೆನ್ಸ್, ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್, ಐಸಿಯು ಸೇರಿದಂತೆ ಅಗತ್ಯ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಅವರು ವಿವರಿಸಿದ್ದಾರೆ.

ಪ್ರಸ್ತುತ ಈ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು 80ರಿಂದ 100 ಕಿಲೋಮೀಟರ್ ದೂರದ ಹುಬ್ಬಳ್ಳಿ, ಕಾರವಾರ ಅಥವಾ ಕುಮಟಾದ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಇದೆ. ಯಲ್ಲಾಪುರದಲ್ಲೇ ಟ್ರೋಮಾ ಸೆಂಟರ್ ಸ್ಥಾಪನೆಯಾದರೆ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲೇ ತುರ್ತು ಚಿಕಿತ್ಸೆ ದೊರೆತು ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಬೇರೆಡೆಗಳಲ್ಲಿರುವ ಸಂದರ್ಭದಲ್ಲಿ ಅಪಘಾತ ವಲಯವಾಗಿರುವ ಯಲ್ಲಾಪುರಕ್ಕೆ ಕನಿಷ್ಠ ಒಂದು ಟ್ರೋಮಾ ಸೆಂಟರ್ ಆಸ್ಪತ್ರೆಯಾದರೂ ಅಗತ್ಯವಾಗಿದೆ. ಈಗಿನ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ವಿಶೇಷ ಟ್ರೋಮಾ ಸೇವೆ ಆರಂಭವಾದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿ, ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರಿ ಯಲ್ಲಾಪುರಕ್ಕೆ ಟ್ರೋಮಾ ಸೆಂಟರ್ ಮಂಜೂರು ಮಾಡುವಂತೆ ಕ್ಷೇತ್ರದ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ರಾಮು ನಾಯ್ಕ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share