Friday, July 24, 2026
Join WhatsApp Group
HomeInformationಹಿರಿಯರು ಮಾಡಿದ ಸಾಲ ಯಾರ ಹೆಗಲಿಗೆ?

ಹಿರಿಯರು ಮಾಡಿದ ಸಾಲ ಯಾರ ಹೆಗಲಿಗೆ?

ಇತ್ತೀಚಿನ ದಿನಗಳಲ್ಲಿ ಮನೆ ಸಾಲ, ವಾಹನ ಸಾಲ, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯವಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಬಹುತೇಕ ಜೀವನವೇ ಈಗ EMIಗಳ ಸುತ್ತ ತಿರುಗುತ್ತಿದೆ.

ಆದರೆ ಜೀವನ ಯಾವಾಗಲೂ ನಾವಂದುಕೊಂಡಂತೆಯೇ ಸಾಗದು. ಕೆಲವೊಮ್ಮೆ ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯೊಬ್ಬರು ಅಕಸ್ಮಾತ್ತಾಗಿ ಸಾವನ್ನಪ್ಪುತ್ತಾರೆ. ಆಗ ದುಃಖದ ಜೊತೆಗೆ “ಅವರು ಮಾಡಿದ ಸಾಲವನ್ನು ಈಗ ಯಾರು ತೀರಿಸಬೇಕು?” ಎಂಬ ಚಿಂತೆಯೂ ಕಾಡತೊಡಗುತ್ತದೆ.

ತಂದೆ ಅಥವಾ ಗಂಡ ಮಾಡಿದ ಸಾಲಕ್ಕೆ ಮಕ್ಕಳು ಅಥವಾ ಕುಟುಂಬದವರು ಕಾನೂನುಬದ್ಧವಾಗಿ ಜವಾಬ್ದಾರರೇ? ಬ್ಯಾಂಕ್ ಮನೆಗೆ ಬಂದು ಒತ್ತಡ ಹಾಕಬಹುದೇ? ಆಸ್ತಿ ಇಲ್ಲದಿದ್ದರೆ ಏನಾಗುತ್ತದೆ? ಇಂತಹ ಪ್ರಶ್ನೆಗಳ ಬಗ್ಗೆ ಹಲವರಿಗೆ ಸ್ಪಷ್ಟ ಮಾಹಿತಿ ಇಲ್ಲ.

ಮಾಹಿತಿ ಕೊರತೆಯಿಂದ ಕೆಲ ಕುಟುಂಬಗಳು ಅನಗತ್ಯ ಭಯಕ್ಕೆ ಒಳಗಾಗುತ್ತವೆ. ಆದರೆ ಕಾನೂನು ಈ ವಿಚಾರದಲ್ಲಿ ಕೆಲವು ಸ್ಪಷ್ಟ ನಿಯಮಗಳನ್ನು ಹೇಳುತ್ತದೆ.

ಮೊದಲನೆಯದಾಗಿ, ಮೃತ ವ್ಯಕ್ತಿಯ ಸಾಲವನ್ನು ಕುಟುಂಬದವರು ತಮ್ಮ ವೈಯಕ್ತಿಕ ಹಣದಿಂದ ಕಟ್ಟಲೇಬೇಕು ಎಂಬ ಕಡ್ಡಾಯ ನಿಯಮ ಇಲ್ಲ. ಅಂದರೆ, ತಂದೆ ಸಾಲ ಮಾಡಿ ಸಾವನ್ನಪ್ಪಿದರೆ ಮಗ ತನ್ನ ವೇತನ ಅಥವಾ ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕ್‌ಗೆ ಹಣ ಕೊಡಲೇಬೇಕು ಎಂಬ ಕಾನೂನು ಇಲ್ಲ.

ಆದರೆ ಇದರರ್ಥ ಸಾಲ ಸಂಪೂರ್ಣ ಮಾಫಿ ಎನ್ನುವುದಲ್ಲ. ಮೃತ ವ್ಯಕ್ತಿಯ ಹೆಸರಿನಲ್ಲಿ ಮನೆ, ಜಮೀನು, ಬ್ಯಾಂಕ್ ಠೇವಣಿ, ಷೇರುಗಳು, ವಾಹನ ಅಥವಾ ಇತರೆ ಆಸ್ತಿ ಇದ್ದರೆ, ಆ ಆಸ್ತಿಯ ಮೌಲ್ಯದ ಮಟ್ಟಿಗೆ ಮಾತ್ರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಹಣ ವಸೂಲಿ ಮಾಡಬಹುದು.

ಉದಾಹರಣೆಗೆ, ಒಬ್ಬರ ಹೆಸರಿನಲ್ಲಿ 20 ಲಕ್ಷ ರೂ ಸಾಲ ಇದ್ದು, ಅವರ ಆಸ್ತಿ ಮೌಲ್ಯ 8 ಲಕ್ಷ ರೂ ಮಾತ್ರ ಇದ್ದರೆ, ವಾರಸುದಾರರು 8 ಲಕ್ಷದವರೆಗೆ ಮಾತ್ರ ಹೊಣೆಗಾರರಾಗುತ್ತಾರೆ. ಉಳಿದ ಹಣಕ್ಕಾಗಿ ಬ್ಯಾಂಕ್ ಕುಟುಂಬದವರ ವೈಯಕ್ತಿಕ ಹಣದ ಮೇಲೆ ಹಕ್ಕು ಚಲಾಯಿಸಲು ಅವಕಾಶವಿಲ್ಲ.

ಮನೆ ಸಾಲ ಮತ್ತು ವಾಹನ ಸಾಲದಂತಹ ಸುರಕ್ಷಿತ ಸಾಲಗಳಲ್ಲಿ (Secured Loan) ಬ್ಯಾಂಕ್‌ಗೆ ಆ ಆಸ್ತಿಯನ್ನು ವಶಪಡಿಸಿಕೊಳ್ಳುವ ಹಕ್ಕು ಇರುತ್ತದೆ. ಮನೆ ಸಾಲ ತೀರಿಸಲಾಗದಿದ್ದರೆ ಬ್ಯಾಂಕ್ ಮನೆಯನ್ನು ಹರಾಜು ಮಾಡಬಹುದು. ವಾಹನ ಸಾಲದ ಪ್ರಕರಣದಲ್ಲಿ ವಾಹನವನ್ನು ವಶಪಡಿಸಿಕೊಳ್ಳಬಹುದು.

ಆದರೆ ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್‌ಗಳಂತಹ ಅಸುರಕ್ಷಿತ ಸಾಲಗಳಲ್ಲಿ (Unsecured Loan) ಬ್ಯಾಂಕ್ ನೇರವಾಗಿ ಕುಟುಂಬದವರ ಮೇಲೆ ಒತ್ತಡ ಹೇರುವಂತಿಲ್ಲ. ಮೃತ ವ್ಯಕ್ತಿಯ ಖಾತೆ ಅಥವಾ ಆಸ್ತಿ ಇದ್ದಷ್ಟರಲ್ಲೇ ಹಣ ವಸೂಲಿ ಮಾಡಲು ಸಾಧ್ಯ.

ಇಲ್ಲಿ ಜಂಟಿ ಸಾಲ (Joint Loan) ಇದ್ದರೆ ಪರಿಸ್ಥಿತಿ ಬದಲಾಗುತ್ತದೆ. ಉದಾಹರಣೆಗೆ ಗಂಡ-ಹೆಂಡತಿ ಸೇರಿ ಮನೆ ಸಾಲ ಪಡೆದಿದ್ದರೆ, ಒಬ್ಬರು ಸಾವನ್ನಪ್ಪಿದ ನಂತರ ಉಳಿದ ವ್ಯಕ್ತಿಯೇ EMI ಕಟ್ಟುವ ಹೊಣೆ ಹೊರುತ್ತಾರೆ. ಹಾಗೆಯೇ ಯಾರಾದರೂ ಸಾಲಕ್ಕೆ ಗ್ಯಾರಂಟರ್ ಆಗಿ ಸಹಿ ಹಾಕಿದ್ದರೆ, ಆ ಸಾಲದ ಕಾನೂನು ಜವಾಬ್ದಾರಿಯೂ ಅವರ ಮೇಲಿರುತ್ತದೆ.

ಕೆಲ ಬ್ಯಾಂಕ್‌ಗಳು ಸಾಲದ ಜೊತೆಗೆ “Loan Insurance” ಕೊಡುತ್ತವೆ. ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ವಿಮಾ ಕಂಪನಿಯೇ ಉಳಿದ ಸಾಲವನ್ನು ತೀರಿಸುವ ವ್ಯವಸ್ಥೆಯೂ ಇರುತ್ತದೆ. ಆದರೆ ಹಲವರಿಗೆ ತಮ್ಮ ಸಾಲಕ್ಕೆ ಇನ್ಸೂರೆನ್ಸ್ ಇದೆಯೇ ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿ ಮರಣದ ಬಳಿಕ ಮೊದಲೇ ಬ್ಯಾಂಕ್ ಸಂಪರ್ಕಿಸಿ ಈ ಮಾಹಿತಿ ಪರಿಶೀಲಿಸುವುದು ಮುಖ್ಯ.

RBI ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ಅಥವಾ ರಿಕವರಿ ಏಜೆಂಟ್‌ಗಳು ಮೃತರ ಕುಟುಂಬಕ್ಕೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ಸಾಮಾಜಿಕವಾಗಿ ಅವಮಾನಿಸುವುದು ಕಾನೂನುಬಾಹಿರ. ಇಂತಹ ಘಟನೆಗಳು ನಡೆದರೆ ಪೊಲೀಸ್ ಠಾಣೆ, ಬ್ಯಾಂಕ್‌ನ ಮೇಲಧಿಕಾರಿಗಳು ಅಥವಾ RBI ದೂರು ವ್ಯವಸ್ಥೆಗೆ ದೂರು ನೀಡಬಹುದು. ಇಂತಹ ಸಂದರ್ಭಗಳಲ್ಲಿ ಅವರಿವರ ಮಾತು ಕೇಳುವುದಕ್ಕಿಂತ ಕಾನೂನು ತಜ್ಞರ ಸಲಹೆ/ಮಾರ್ಗದರ್ಶನ ಪಡೆಯುವುದು ಉತ್ತಮ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share