Friday, July 24, 2026
Join WhatsApp Group
HomeLocal Newsಯಲ್ಲಾಪುರದಲ್ಲಿ ‘ಪ್ರತಿಬಿಂಬ’, ‘ಸಂಸ್ಕಾರೋತ್ಸವ’ ಮೇ 23-24ಕ್ಕೆ

ಯಲ್ಲಾಪುರದಲ್ಲಿ ‘ಪ್ರತಿಬಿಂಬ’, ‘ಸಂಸ್ಕಾರೋತ್ಸವ’ ಮೇ 23-24ಕ್ಕೆ

ಯಲ್ಲಾಪುರ: ಪಟ್ಟಣದ ಕಾರ್ಮಿಕ ಭವನದಲ್ಲಿ ಮೇ 23 ಹಾಗೂ 24ರಂದು ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ʻಪ್ರತಿಬಿಂಬʼ ಹಾಗೂ ʻಸಂಸ್ಕಾರೋತ್ಸವʼ ಹವ್ಯಕ ಸಮಾಜೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಮಹಾಸಭೆಯ ನಿರ್ದೇಶಕ ಪ್ರಶಾಂತ ಹೆಗಡೆ ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿ, ಮೇ 23ರಂದು ʻಪ್ರತಿಬಿಂಬʼ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಉದ್ಘಾಟಿಸಲಿದ್ದಾರೆ. ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ “ಸ್ಪರ್ಧಾ ಸೌರಭ” ಕಾರ್ಯಕ್ರಮ ನಡೆಯಲಿದ್ದು, ವಿವಿಧ ವಯೋಮಿತಿಗಳಿಗನುಗುಣವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಮೇ 24ರಂದು “ಸಂಸ್ಕಾರೋತ್ಸವ” ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 6.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಗಾಯತ್ರೀ ಜಪಾನುಷ್ಠಾನ, ಗಾಯತ್ರಿ ಹವನ, ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಭಗವದ್ಗೀತಾ ಪಠಣ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಮಾಜಿ ಸಂಸದ ಅನಂತ ಕುಮಾರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗ್ಗೆ 10.50ಕ್ಕೆ ಮಹಿಳಾ ವೇದಿಕೆ ಉದ್ಘಾಟನೆ ನಡೆಯಲಿದ್ದು, “ಶಿಕ್ಷಣದಿಂದ ಮಾತ್ರ ಸಂಸ್ಕಾರ ಜಾಗೃತಿ” ಕುರಿತು ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. “ಸಂಸ್ಕಾರಗಳ ವೈಜ್ಞಾನಿಕ ಹಿನ್ನೆಲೆ” ಕುರಿತು ಜಿ.ಎಸ್. ನಟೇಶ ಹಾಗೂ “ಷೋಡಶ ಸಂಸ್ಕಾರಗಳ ಮಹತ್ವ” ಕುರಿತು ವಿದ್ವಾನ್ ಜಗದೀಶ ಶರ್ಮಾ ಸಂಪ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಪ್ರಸಿದ್ಧ ಭಾಗವತ ರಾಮಕೃಷ್ಣ ಹಿಲ್ಲೂರು ಮತ್ತು ತಂಡದವರಿಂದ ಗಾನ-ನಾಟ್ಯ ವೈಭವ ನಡೆಯಲಿದೆ. ಹಳವಳ್ಳಿಯ ಆಶಾ ಯುವತಿ ಮಂಡಳದವರಿಂದ ಜಾನಪದ ನೃತ್ಯ ಪ್ರದರ್ಶನ ಇರಲಿದೆ. “ಆಧುನಿಕ ಬದುಕಿಗೆ ಸಂಸ್ಕಾರಗಳ ತಳಹದಿ” ಕುರಿತು ವಿದ್ವತ್ ಗೋಷ್ಠಿ ಹಾಗೂ “ಭಾರತೀಯ ಯುವ ಸಂಸ್ಕಾರ” ವಿಷಯವಾಗಿ ಚಿಂತಕ ರೋಹಿತ್ ಚಕ್ರತೀರ್ಥ ಉಪನ್ಯಾಸ ನೀಡಲಿದ್ದಾರೆ.

ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ. ಗಿರಿಧರ ಕಜೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ “ಜಾಂಬವತಿ ಕಲ್ಯಾಣ” ತಾಳಮದ್ದಲೆ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಪ್ರತಿಬಿಂಬ ಸಂಚಾಲಕ ಅನಂತ ಗಾಂವ್ಕರ ಕಂಚೀಪಾಲ, ಸಂಸ್ಕಾರೋತ್ಸವ ಸಂಚಾಲಕ ಸಣ್ಣಪ್ಪ ಭಾಗ್ವತ, ಸದಸ್ಯತ್ವ ಅಭಿಯಾನದ ಸಂಚಾಲಕ ಕೃಷ್ಣಮೂರ್ತಿ, ಪ್ರಮುಖರಾದ ಶಾಂತಾರಾಮ ಹೆಗಡೆ ಹಾಗೂ ರಾಜಾರಾಮ ಹೆಗಡೆ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share