9 ತಿಂಗಳ ಕಾಯುವಿಕೆಗೆ ಕೊನೆಗೂ ತೆರೆ
ಯಲ್ಲಾಪುರ: ಕಳೆದ ವರ್ಷ ನಡೆದ ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಂಎಸ್) ಆಡಳಿತ ಮಂಡಳಿ ಚುನಾವಣೆಯ ಮತ ಎಣಿಕೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಂತೆ ಜುಲೈ 6 (ಸೋಮವಾರ)ರಂದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲು ಚುನಾವಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
2025ರ ಸೆಪ್ಟೆಂಬರ್ 28ರಂದು ಸಂಘದ ಆಡಳಿತ ಮಂಡಳಿ ಚುನಾವಣೆಗೆ ಮತದಾನ ನಡೆದಿತ್ತು. ಆದರೆ, ಚುನಾವಣೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು.
ಇದೀಗ 2026ರ ಜುಲೈ 1ರಂದು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠವು ಏಳು ದಿನಗಳೊಳಗೆ ಮತ ಎಣಿಕೆ ಪೂರ್ಣಗೊಳಿಸಿ ಫಲಿತಾಂಶ ಘೋಷಿಸುವಂತೆ ಸೂಚನೆ ನೀಡಿದೆ.
ಅದರಂತೆ, ಜುಲೈ 6ರಂದು ಬೆಳಿಗ್ಗೆ 11 ಗಂಟೆಗೆ ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಭಾಭವನದಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಂದು ಬೆಳಿಗ್ಗೆ 9.30 ಗಂಟೆಗೆ ಸಭಾಭವನದಲ್ಲಿ ಖುದ್ದಾಗಿ ಹಾಜರಾಗುವಂತೆ ಚುನಾವಣಾಧಿಕಾರಿ ಸೂಚಿಸಿದ್ದಾರೆ.
ಸಂಘದ ವಿವಿಧ ಕ್ಷೇತ್ರಗಳ ಸಾಮಾನ್ಯ, ಮಹಿಳೆ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಮೀಸಲು ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆ ನಡೆಸಿ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
ಈ ಫಲಿತಾಂಶದ ಮೂಲಕ ಸುಮಾರು ಒಂಬತ್ತು ತಿಂಗಳಿನಿಂದ ಬಾಕಿ ಉಳಿದಿದ್ದ ಸಂಘದ ಆಡಳಿತ ಮಂಡಳಿ ರಚನೆಗೆ ಕೊನೆಗೂ ತೆರೆ ಬೀಳುವ ನಿರೀಕ್ಷೆ ಮೂಡಿದೆ.