ಹಾಸನ: ಬೆಳಗ್ಗೆಯೇ ಆತ ನೇರವಾಗಿ ಸೇತುವೆಯ ಮೇಲಕ್ಕೆ ಹೋದ. ಕೆಳಗೆ ನದಿಯತ್ತ ಕೊನೆಯ ನೋಟ ಬೀರಿದ. ಒಂದೇ ಕ್ಷಣದಲ್ಲಿ ಜೀವ ಕೊನೆಗೊಳಿಸುವ ನಿರ್ಧಾರ ಮಾಡಿ ಕೆಳಕ್ಕೆ ಹಾರಿದ. ಆದರೆ ವಿಧಿ ಬರೆದಿದ್ದ ಕಥೆ ಬೇರೆಯೇ ಆಗಿತ್ತು. ನದಿಯಲ್ಲಿ ನೀರೇ ಇರಲಿಲ್ಲ…! ಆತ ನೇರವಾಗಿ ಮರಳಿನ ಮೇಲೆ ಬಿದ್ದು, ಆತ್ಮಹತ್ಯೆಯ ಉದ್ದೇಶ ವಿಫಲವಾಗಿತ್ತು.
ಈ ಅಚ್ಚರಿಯ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.ಹಾಸನ ಮೂಲದ ಚಿರಂತ್ (38) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ-75ರ ಬಿಎಂ ರಸ್ತೆಯ ಮಳಲಿ ಬೈಪಾಸ್ ಸಮೀಪದ ಹೇಮಾವತಿ ನದಿ ಸೇತುವೆಯಿಂದ ಆತ ಜಿಗಿದಿದ್ದ.
ಸೇತುವೆಯಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಹಾರುವುದನ್ನು ಕಂಡ ಸ್ಥಳೀಯರು ಗಾಬರಿಗೊಂಡು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ನೋಡಿದಾಗ, ನದಿಯಲ್ಲಿ ನೀರಿನ ಮಟ್ಟ ಅತ್ಯಂತ ಕಡಿಮೆಯಿದ್ದ ಕಾರಣ ಚಿರಂತ್ ಮರಳಿನ ಮೇಲೆ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಚಿರಂತ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದರು. ಸಮಯೋಚಿತ ಕಾರ್ಯಾಚರಣೆಯಿಂದ ಅವರ ಜೀವ ಉಳಿದಿದೆ ಎನ್ನಲಾಗಿದೆ.
ಈ ಘಟನೆ ಸಕಲೇಶಪುರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.