Friday, July 24, 2026
Join WhatsApp Group
HomeLocal Newsಅಧಿಕಾರ ಪಡೆಯಲು ಷಡ್ಯಂತ್ರ

ಅಧಿಕಾರ ಪಡೆಯಲು ಷಡ್ಯಂತ್ರ

ಟಿಎಂಎಸ್‌ನಲ್ಲಿ ಧರಣಿ – ಆಡಳಿತಾಧಿಕಾರಿ ವಿರುದ್ಧ ಆಕ್ರೋಶ

ಯಲ್ಲಾಪುರ: ಇಲ್ಲಿನ ಟಿಎಂಎಸ್ ಮಾರ್ಕೆಟಿಂಗ್ ಸೊಸೈಟಿಯ ಸದಸ್ಯರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ರಾಜಕೀಯ ಷಡ್ಯಂತ್ರ ಹಾಗೂ ಕಾನೂನು ಮೀರಿ ಕಾರ್ಯನಿರ್ವಹಿಸುತ್ತಿರುವ ಆಡಳಿತಾಧಿಕಾರಿಯ ನಡೆಗೆ ವಿರೋಧ ವ್ಯಕ್ತಪಡಿಸಿ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ವತಿಯಿಂದ ಬುಧವಾರ ಟಿಎಂಎಸ್ ಆವರಣದಲ್ಲಿ ಧರಣಿ ನಡೆಸಲಾಯಿತು.

ಧರಣಿಯಲ್ಲಿ ಮಾತನಾಡಿದ ಟಿಎಂಎಸ್ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಸಂಸ್ಥೆಯ ಸಹಸ್ರಾರು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸ್ಥೆಯ ಉಳಿವಿಗಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ. ನ್ಯಾಯಾಲಯದ ತೀರ್ಪು ಹೊರಬರುವ ಹೊತ್ತಿಗೆ ಸಂಸ್ಥೆಗೆ ಹಾನಿಕಾರಕವಾಗುವ ನಿರ್ಧಾರಗಳನ್ನು ಆಡಳಿತಾಧಿಕಾರಿಗಳು ಕೈಗೊಳ್ಳಲು ಮುಂದಾಗಿರುವುದು ಅವರ ನಡೆ ಕುರಿತು ಅನುಮಾನ ಹುಟ್ಟಿಸುತ್ತಿದೆ. ಅವರು ಅಧಿಕಾರಿಯೋ ಅಥವಾ ರಾಜಕಾರಣಿಗಳ ಕೈಗೊಂಬೆಯೋ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಹಾಗೂ ಸದಸ್ಯರ ಹಿತಕ್ಕಾಗಿ ಹೋರಾಟ ಮುಂದುವರಿಯಲಿದೆ. ಸಮಸ್ಯೆಗೆ ಸ್ಪಂದನೆ ದೊರೆಯದಿದ್ದರೆ ರಸ್ತೆ ತಡೆ ಹೋರಾಟ ಕೈಗೊಳ್ಳಲಾಗುವುದು. ಆಗಲೂ ಕ್ರಮ ಕೈಗೊಳ್ಳದಿದ್ದರೆ ಸಂಸ್ಥೆಯ ಎದುರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರಲ್ಲದೆ, ರೈತರ ಹಿತಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಬೇಕಾದರೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರೈತರ ಜೀವನಾಡಿಯಾಗಿರುವ ಸಂಸ್ಥೆಯನ್ನು ಅವ್ಯವಸ್ಥೆಯ ಆಗರವಾಗಿಸಲು ಸಂಸ್ಥೆಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಹಾಗೂ ಶಾಸಕರೇ ಕಾರಣ ಎಂದು ಆರೋಪಿಸಿದರು.

ನ್ಯಾಯಾಲಯದಲ್ಲಿ ತೀರ್ಪು ಅಗ್ಗಾಶಿಕುಂಬ್ರಿ ನೇತೃತ್ವದ ತಂಡದ ಪರವಾಗಿ ಬರಬಹುದು ಎಂಬ ಆತಂಕದಿಂದ ಕೆಲವು ವಲಯಗಳು ಷಡ್ಯಂತ್ರ ರೂಪಿಸುತ್ತಿವೆ. ಎಷ್ಟೇ ಅಡೆತಡೆಗಳು ಎದುರಾದರೂ ಸಂಸ್ಥೆಯ ಉಳಿವಿಗಾಗಿ ಹೋರಾಟ ಮುಂದುವರಿಯುತ್ತದೆ. ಸಹಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಬಂದು ಆಡಳಿತಾಧಿಕಾರಿ ನೇಮಕಾತಿಯನ್ನು ಹಿಂಪಡೆಯಬೇಕು ಹಾಗೂ ನ್ಯಾಯಾಲಯದ ಮೊಕದ್ದಮೆ ಹಿಂಪಡೆಯುವ ಠರಾವನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ರೈತರ ಹಿತಕ್ಕಾಗಿ ಸಹಕಾರಿ ಸಂಸ್ಥೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಶಾಸಕ ಹೆಬ್ಬಾರರೇ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಧುರೀಣ ಪ್ರಮೋದ ಹೆಗಡೆ ಮಾತನಾಡಿ, ಆಡಳಿತಾಧಿಕಾರಿ ಲಂಚದ ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ಕರ್ತವ್ಯದ ಮಿತಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಶಿಕ್ಷೆ ತಪ್ಪದು. ರೈತರು ಅನ್ಯಾಯದ ವಿರುದ್ಧ ಎದ್ದು ನಿಂತಾಗ ಜಯ ಅಂತಿಮವಾಗಿ ರೈತರದ್ದೇ ಆಗುತ್ತದೆ, ಭ್ರಷ್ಟ ಹಣಕ್ಕೆ ಜಯ ಸಿಗುವುದಿಲ್ಲ ಎಂದು ಹೇಳಿದರು.

ಸಂಸ್ಥೆಯ ಮಾಜಿ ನಿರ್ದೇಶಕರಾದ ವೆಂಕಟರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ಹಿರಿಯರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಸೇರಿದಂತೆ ಹಲವರು ಮಾತನಾಡಿ ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share