Ad
Ad
Ad
Home Local News ಯಲ್ಲಾಪುರ | 15 ಗ್ರಾ.ಪಂಗಳಲ್ಲಿ ತುರ್ತು ಕಾಮಗಾರಿಗೆ ಸೂಚನೆ

ಯಲ್ಲಾಪುರ | 15 ಗ್ರಾ.ಪಂಗಳಲ್ಲಿ ತುರ್ತು ಕಾಮಗಾರಿಗೆ ಸೂಚನೆ

0
14

ಯಲ್ಲಾಪುರ: ಮಳೆಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಯಲ್ಲಾಪುರ ತಾಲೂಕಿನ ಎಲ್ಲಾ 15 ಗ್ರಾಮ ಪಂಚಾಯಿತಿಗಳಿಗೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಸೂಚನೆ ನೀಡಿದೆ.

ಗ್ರಾ.ಪಂಗಳ ಮಾಜಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆ.17ರಂದು ತಾಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದ ಹಿನ್ನೆಲೆಯಲ್ಲಿ, ಈ ಕಾಮಗಾರಿಗಳನ್ನು ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಮುಖವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಸಾರ್ವಜನಿಕ ಕುಡಿಯುವ ನೀರಿನ ಬಾವಿಗಳಿಗೆ ಕ್ಲೋರಿನೇಶನ್ ಮಾಡಿಸುವಂತೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಮತ್ತೊಂದೆಡೆ, ಮಳೆಯಿಂದಾಗಿ ಕಾಂಕ್ರೀಟ್ ರಸ್ತೆಗಳ ಮೇಲೆ ಪಾಚಿ ಕಟ್ಟಿಕೊಂಡು ಜಾರುವ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕಾಂಕ್ರೀಟ್ ರಸ್ತೆಗಳಿಗೆ ಸುಣ್ಣ ಹಾಕಿ ಜಾರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ರಸ್ತೆಗಳ ಬದಿಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಮಳೆನೀರು ರಸ್ತೆಗೆ ಹರಿಯುತ್ತಿರುವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದ್ದು, ಚರಂಡಿಗಳ ಹೂಳೆತ್ತಿ ಸ್ವಚ್ಛಗೊಳಿಸುವುದು ಹಾಗೂ ರಸ್ತೆ ಬದಿಯಲ್ಲಿ ಬೆಳೆದಿರುವ ಕಿರುಜಾಡಿಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ.

ಇದರ ಜತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳ ಆವರಣದಲ್ಲಿರುವ ಅಪಾಯಕಾರಿ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿ ಬೆಳೆದಿರುವ ಗಿಡಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಮಳೆಗಾಲದಲ್ಲಿ ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಎಲ್ಲ ಕಾಮಗಾರಿಗಳನ್ನು ವಿಳಂಬ ಮಾಡದೆ ಕೈಗೊಳ್ಳುವಂತೆ ತಾಲೂಕಿನ 15 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!