ಬನವಾಸಿ: ಬೈಕ್‌ಗೆ ನೇತು ಹಾಕಿದ್ದ ಕೈಚೀಲವನ್ನು ಕಳ್ಳರು ಎಗರಿಸಿ ಅದರಲ್ಲಿದ್ದ ₹3 ಲಕ್ಷ ನಗದು, ಕೆನರಾ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಕಳವು ಮಾಡಿರುವ ಘಟನೆ ಬನವಾಸಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಅಂಡಗಿ ಗ್ರಾಮದ ನಿವಾಸಿ ಹಬೀಬ್ ರೇಹಮಾನ್ ಗಫೂರ್ ಸಾಬ್ ಅವರು ಬನವಾಸಿ ಕೆನರಾ ಬ್ಯಾಂಕ್ ಶಾಖೆಯಿಂದ ತಮ್ಮ ಖಾತೆಯಲ್ಲಿದ್ದ ₹3 ಲಕ್ಷ ಹಣವನ್ನು ಹಿಂಪಡೆದಿದ್ದರು. ನಗದು ಹಣದೊಂದಿಗೆ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಕೈಚೀಲದಲ್ಲಿ ಹಾಕಿ, ಬೈಕ್‌ನ ಎಡಭಾಗದ ಕಬ್ಬಿಣದ ಹುಕ್‌ಗೆ ನೇತು ಹಾಕಿಕೊಂಡು ಅಂಡಗಿ ಕಡೆಗೆ ತೆರಳುತ್ತಿದ್ದರು.
ಮಾರ್ಗಮಧ್ಯೆ ದಾಸನಕೊಪ್ಪ ಕ್ರಾಸ್ ಬಳಿ ಮನೆಗೆ ತಿಂಡಿ-ತಿನಿಸು ತೆಗೆದುಕೊಂಡು ಹೋಗುವ ಉದ್ದೇಶದಿಂದ ಬೈಕ್ ಅನ್ನು ಕದಂಬ ಸರ್ಕಲ್ ಸಮೀಪದ ಎಸ್.ಎಲ್. ಅಯ್ಯಂಗಾರ್ ಬೇಕರಿ ಎದುರು ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಕೆಲವೇ ನಿಮಿಷಗಳ ಬಳಿಕ ಹಿಂದಿರುಗಿ ನೋಡಿದಾಗ ಬೈಕ್‌ಗೆ ನೇತು ಹಾಕಿದ್ದ ಕೈಚೀಲ ಕಾಣೆಯಾಗಿತ್ತು.
ಬ್ಯಾಗ್‌ನಲ್ಲಿದ್ದ ₹3 ಲಕ್ಷ ನಗದು, ಕೆನರಾ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಅನ್ನು ಕಳ್ಳರು ಕಳವು ಮಾಡಿರುವುದು ತಿಳಿದುಬಂದಿದ್ದು, ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.