ಯಲ್ಲಾಪುರ: ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ರಸ್ತೆ ನಿರ್ವಹಣೆಗೆ ಆದ್ಯತೆ ನೀಡದ ಪರಿಣಾಮ ಯಲ್ಲಾಪುರ ತಾಲೂಕಿನಲ್ಲಿ ರಸ್ತೆಗಳು ಹೊಂಡಮಯವಾಗಿವೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದ್ದಾರೆ.
ಯಲ್ಲಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡದೇ ಹೊಂಡಗಳ ಭಾಗ್ಯ ಕರುಣಿಸಿದೆ. ಇಂತಹ ಭಾಗ್ಯಗಳು ನಮ್ಮ ತಾಲೂಕಿಗೆ, ನಮ್ಮ ರಾಜ್ಯಕ್ಕೆ ಬೇಕಿತ್ತೇ ಎಂದು ಪ್ರಶ್ನಿಸಿದರು.
ತಾಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ತುರ್ತು ನಿರ್ವಹಣೆ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ. ಹೊಂಡಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸುವುದಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಅಲ್ಲಿಯೇ ಮೊಕ್ಕಾಂ ಹೂಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವುದಾಗಿ ಹೇಳಿದರು.
ಕಂಪ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ ಭಟ್ಟ ಮಾಳಕೊಪ್ಪ ಹಾಗೂ ಇಡಗುಂದಿ ಮಹಾಶಕ್ತಿ ಕೇಂದ್ರದ ಜಿ.ಆರ್. ಭಾಗ್ವತ್ ಮಾತನಾಡಿ, ಯಲ್ಲಾಪುರ–ಶಿರಸಿ ರಸ್ತೆ, ಚಿನ್ನಾಪುರ–ಬಾರೆ ರಸ್ತೆ ಹಾಗೂ ನಂದೊಳ್ಳಿ–ಮಾಗೋಡ ರಸ್ತೆ ಸೇರಿದಂತೆ ತಾಲೂಕಿನ ಹಲವು PWD ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವಾಹನ ಸಂಚಾರ ದುಸ್ತರವಾಗಿದ್ದು, ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಒಂದು ವಾರದೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಮಾತನಾಡಿ, ತಾಲೂಕಿನ PWD ರಸ್ತೆಗಳ ದುಸ್ಥಿತಿಗೆ ಇಂಜಿನಿಯರಿಂಗ್ ವಿಭಾಗವೇ ಸಂಪೂರ್ಣ ಹೊಣೆ ಎಂದು ಆರೋಪಿಸಿದರು.
ಇದೇ ವೇಳೆ ಪಟ್ಟಣದ ಮೂಲಸೌಕರ್ಯ ಹಾಗೂ ಸ್ವಚ್ಛತೆ ವಿಚಾರವನ್ನೂ ಬಿಜೆಪಿ ಮುಖಂಡರು ಪ್ರಸ್ತಾಪಿಸಿದರು. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ, ಪಟ್ಟಣದಲ್ಲಿ ಹಂದಿಗಳು, ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು ಎಂದು ಪಟ್ಟಣ ಪಂಚಾಯಿತಿಯನ್ನು ಒತ್ತಾಯಿಸಿದರು.
ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಯುತ್ತಿರುವ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿ, ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನು ಮಾರಾಟ ಮಾಡಬೇಕು ಎಂದು ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ನಿರ್ದೇಶನ ನೀಡಿದ್ದರೂ, ರಸ್ತೆ ಬದಿಯಲ್ಲಿ ಮಾರಾಟ ಮುಂದುವರಿದಿದೆ ಎಂದು ಆರೋಪಿಸಿದರು.
ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಪಟ್ಟಣದ ಅಲಂಕಾರಿಕ ದೀಪಗಳ ಕಾಮಗಾರಿ ಆರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ಸಂಬಂಧಪಟ್ಟ ಇಲಾಖೆಯ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಮುಖಂಡ ನಾಗೇಂದ್ರ ಪತ್ರೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.