ಕುಮಟಾ: ಸಮುದ್ರ ದಡದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ಸಾರ್ವಜನಿಕರ ಸಮಯೋಚಿತ ನೆರವು ಹಾಗೂ ERSS-112 ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ವನ್ನಳ್ಳಿ ಹೆಡ್ ಬಂದರು ಪ್ರದೇಶದಲ್ಲಿ ನಡೆದಿದೆ.
ಆಗಸ್ಟ್ 6ರಂದು ಸಾರ್ವಜನಿಕರೊಬ್ಬರು ERSS-112 ಸಹಾಯವಾಣಿಗೆ ಕರೆ ಮಾಡಿ ವನ್ನಳ್ಳಿ ಹೆಡ್ ಬಂದರು ಬಳಿ ವ್ಯಕ್ತಿಯೊಬ್ಬರು ಸಮುದ್ರ ದಡದಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೆ ಸ್ವೀಕರಿಸಿದ ಬಳಿಕ ERSS-112 ಸಿಬ್ಬಂದಿಯಾದ ಆದಮ್ ಶೇಖ್, ವಾಹನ ಚಾಲಕ ಸಂಜೀವ ನಾಯ್ಕ ಹಾಗೂ ಬೀಟ್ ಸಿಬ್ಬಂದಿ ಚಿದಾನಂದ ನಾಯ್ಕ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಸಮುದ್ರ ದಡದಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯ ಸಾರ್ವಜನಿಕರ ಸಹಾಯದಿಂದ ತಕ್ಷಣವೇ ಆಂಬುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸದ್ಯ ವ್ಯಕ್ತಿ ಕ್ಷೇಮವಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಅಪಾಯದ ಸಂದರ್ಭದಲ್ಲಿ ಸಾರ್ವಜನಿಕರು ಸಮಯ ವ್ಯರ್ಥ ಮಾಡದೆ ERSS-112 ಸಹಾಯವಾಣಿಗೆ ಕರೆ ಮಾಡಿದ್ದರಿಂದಲೇ ವ್ಯಕ್ತಿಯನ್ನು ತ್ವರಿತವಾಗಿ ಪತ್ತೆಹಚ್ಚಿ ಅಗತ್ಯ ನೆರವು ನೀಡಲು ಸಾಧ್ಯವಾಯಿತು. ತುರ್ತು ಪರಿಸ್ಥಿತಿಯಲ್ಲಿ 112ಕ್ಕೆ ಕರೆ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ನೆರವು ಪಡೆಯಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.