ಹಳಿಯಾಳ: ಪ್ರತಿದಿನದಂತೆ ಪೂಜೆ ಮುಗಿಸಿ, ದೇವರಿಗೆ ಅರ್ಪಿಸಿದ್ದ ಹೂವುಗಳನ್ನು ಕೆರೆಯಲ್ಲಿ ವಿಸರ್ಜಿಸಲು ಮನೆಯಿಂದ ಹೊರಟಿದ್ದ ಅಜ್ಜಿ ಕೆರೆಯಲ್ಲಿ ಮುಳುಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜಾಯವ್ವಾ ಗಂಗರಾಜ ಸುಳಗೇಕರ (96) ಎಂದು ಗುರುತಿಸಲಾಗಿದೆ.
ಜುಲೈ 21ರ ಬೆಳಿಗ್ಗೆ 10 ಗಂಟೆಯಿಂದ ಜುಲೈ 22ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ಜಾಯವ್ವಾ ಅವರು ಪೂಜೆ ಮಾಡಿದ ಹೂವುಗಳನ್ನು ಕೆರೆಯಲ್ಲಿ ಬಿಡಲು ತೆರಳಿದ್ದ ವೇಳೆ, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ನೀರಿನಿಂದ ಹೊರಬರಲು ಸಾಧ್ಯವಾಗದೇ ಅವರು ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮೃತರ ಪುತ್ರ ಮಾದೇವ ಗಂಗರಾಜ ಸುಳಗೇಕರ ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಯಿಯ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.