ಯಲ್ಲಾಪುರ: ಯಲ್ಲಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಂಎಸ್)ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಸಹಕಾರಿ ಸಂಸ್ಥೆಗಳು ಯಾವ ದಿಕ್ಕಿಗೆ ಸಾಗುತ್ತಿವೆ ಎಂಬ ಪ್ರಶ್ನೆಯನ್ನು ಮತ್ತೆ ಎತ್ತಿವೆ.
ರೈತರ ಆರ್ಥಿಕ ಬಲವರ್ಧನೆಗಾಗಿ ಹುಟ್ಟಿಕೊಂಡ ಸಹಕಾರಿ ಸಂಸ್ಥೆ ಇಂದು ರಾಜಕೀಯದ ಪೈಪೋಟಿಯ ಅಖಾಡವಾಗಿ ಕಾಣಿಸಿಕೊಳ್ಳುತ್ತಿರುವುದು ವಿಷಾದಕರ. ಕಳೆದ ಕೆಲವು ವರ್ಷಗಳಿಂದ ಸಹಕಾರಿ ಸಂಸ್ಥೆಗಳು ಸ್ಥಳೀಯ ರಾಜಕೀಯದ ಹಿಡಿತಕ್ಕೆ ಸಿಲುಕಿ ನಲುಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಾಸ್ತವ. ಸದಸ್ಯರ ಶಕ್ತಿ, ಹಣಕಾಸಿನ ವ್ಯವಹಾರಗಳು ಮತ್ತು ಆಸ್ತಿ–ಪಾಸ್ತಿಗಳ ಮೇಲೆ ಹಿಡಿತ ಸಾಧಿಸುವ ಅವಕಾಶ ಇರುವುದರಿಂದ ಇಂತಹ ಸಂಸ್ಥೆಗಳು ರಾಜಕೀಯ ಶಕ್ತಿಗಳಿಗೆ ಇತ್ತೀಚೆಗೆ ಆಕರ್ಷಕ ವೇದಿಕೆಯಾಗುತ್ತವೆ.
ಟಿಎಂಎಸ್‌ನಲ್ಲಿಯೂ ಈಗ ಕಂಡುಬರುತ್ತಿರುವುದು ಇದೇ ರೀತಿಯ ಶಕ್ತಿ ಪೈಪೋಟಿಯ ಚಿತ್ರ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ನಿವೃತ್ತಿ ಹೊಂದುತ್ತಿದ್ದಂತೆಯೇ ಕ್ಷೇತ್ರದ ಶಾಸಕರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿನಿಂದಾಗಲೇ ರೈತ ವಲಯದಲ್ಲಿ ಅನುಮಾನದ ಹೊಗೆಯಾಡತೊಡಗಿತ್ತು. ಆದರೆ, ಅವರು ನಿವೃತ್ತಿ ಹೊಂದಿದ ಕ್ಷಣದಿಂದಲೇ ಅವರು ಸ್ವತಂತ್ರರು ಮತ್ತು ಅದು ಅವರ ವಯಕ್ತಿಕ ನಡೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ!
ಇನ್ನೊಂದೆಡೆ, ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಸ್ಥೆಯ ಅರ್ಹ ಸದಸ್ಯರು ಮತ ಚಲಾಯಿಸಿದರೂ ನ್ಯಾಯಾಲಯದ ವಿಚಾರಣೆ ಬಾಕಿ ಇರುವುದರಿಂದ ತೀರ್ಪು ಹೊರಬರದೆ, ಮತಪೆಟ್ಟಿಗೆಯೆಂಬ ಫ್ರಿಡ್ಜ್‌ನಲ್ಲಿಯೇ ಸದಸ್ಯರ ತೀರ್ಪು ತಣ್ಣಗೆ ಉಳಿಯುವಂತಾಯ್ತು. ಆದರೆ ಪ್ರಸ್ತುತ ಕಾನೂನುಬದ್ಧ ಆಡಳಿತವನ್ನು ಸಹ ರಾಜಕೀಯದ ಕಣ್ಣಿನಿಂದಲೇ ನೋಡಲಾಗುತ್ತಿರುವುದು ಸಹಕಾರಿ ಚಳವಳಿಯ ದುರಂತವೆನ್ನಬಹುದು.
ವಾಸ್ತವವಾಗಿ, ಸಹಕಾರಿ ಸಂಸ್ಥೆಗಳು ಯಾರೊಬ್ಬರ ವೈಯಕ್ತಿಕ ಪ್ರಭಾವದ ವೇದಿಕೆಗಳಲ್ಲ. ಅವು ಸಾವಿರಾರು ಸದಸ್ಯರ ವಿಶ್ವಾಸದಿಂದ ನಿರ್ಮಿತವಾದ ಸಾರ್ವಜನಿಕ ಸಂಸ್ಥೆಗಳು. ಆದರೆ “ನಾವೇ ಅಧಿಕಾರದಲ್ಲಿರಬೇಕು, ನಮ್ಮ ಮಾತೇ ಅಂತಿಮ” ಎಂಬ ಮನೋಭಾವ ಬೇರೂರಿದಾಗ ಸಹಕಾರಿ ವ್ಯವಸ್ಥೆಯ ಆತ್ಮವೇ ಕುಗ್ಗುತ್ತದೆ. ಕುರ್ಚಿಯನ್ನು ಉಳಿಸಿಕೊಳ್ಳುವ ರಾಜಕೀಯಕ್ಕೆ ಸಹಕಾರಿ ಚಳವಳಿಯ ಹೆಸರು ಬಳಕೆಯಾಗುವುದು ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ಲಾಭ ತರುವುದಿಲ್ಲ.
ಈ ರೀತಿಯ ಸಂಘರ್ಷಗಳು ಮುಂದುವರೆದರೆ ಸದಸ್ಯರ ನಡುವೆ ರಾಜಕೀಯ ಪಕ್ಷಗಳ ಆಧಾರದಲ್ಲಿ ವಿಭಜನೆ ಉಂಟಾಗಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಿನ್ನಡೆಯಾಗುವ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಈ ಘಟನೆ ಮತ್ತೊಂದು ವಾಸ್ತವವನ್ನೂ ನೆನಪಿಸುತ್ತದೆ. ಸಹಕಾರಿ ಸಂಸ್ಥೆಗಳು ಪಾರದರ್ಶಕತೆ, ಜವಾಬ್ದಾರಿ ಮತ್ತು ನಿಯಮಬದ್ಧ ಆಡಳಿತವನ್ನು ಕಾಪಾಡಿಕೊಂಡಾಗ ಮಾತ್ರ ಸಮಾಜದಲ್ಲಿ ತನ್ನ ವಿಶ್ವಾಸವನ್ನು ಉಳಿಸಿಕೊಳ್ಳಬಹುದು. ಆಡಳಿತದ ವಿರುದ್ಧ ಪ್ರಶ್ನೆಗಳು ಕೇಳುವ ಹಕ್ಕು ಸದಸ್ಯರಿಗೆ ಇದ್ದರೂ, ಅದೇ ಸಮಯದಲ್ಲಿ ಸಹಕಾರಿ ಸಂಸ್ಥೆಯ ಗೌರವ ಮತ್ತು ಮೂಲ ಉದ್ದೇಶಗಳನ್ನು ಕಾಪಾಡುವ ಜವಾಬ್ದಾರಿಯೂ ಎಲ್ಲರ ಮೇಲಿದೆ.
ಯಲ್ಲಾಪುರದ ಟಿಎಂಎಸ್‌ನಲ್ಲಿ ನಡೆಯುತ್ತಿರುವ ಈ ರಾಜಕೀಯ ಸಂಘರ್ಷ ಅಂತಿಮವಾಗಿ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಕಾಲವೇ ಹೇಳಬೇಕು. ಆದರೆ ಒಂದು ಸಂಗತಿ ಸ್ಪಷ್ಟ. ಸಹಕಾರಿ ಸಂಸ್ಥೆಗಳು ರಾಜಕೀಯದ ದಾಳಗಳಾಗಿಬಿಟ್ಟರೆ ಅವುಗಳ ಬಲ ಕುಗ್ಗುತ್ತದೆ. ನಿಯಮಬದ್ಧ ಮತ್ತು ಪಾರದರ್ಶಕ ಆಡಳಿತಕ್ಕೆ ಅವಕಾಶ ನೀಡಿದರೆ ಅವು ಮತ್ತೆ ರೈತರ ಶಕ್ತಿಕೇಂದ್ರಗಳಾಗಬಹುದು. ಯಲ್ಲಾಪುರದ ಈ ಬೆಳವಣಿಗೆಗಳು ಸಹಕಾರಿ ಚಳವಳಿಗೆ ಗಂಭೀರವಾದ ಎಚ್ಚರಿಕೆಯ ಘಂಟೆಯಂತೆ ಕೇಳಿಸುತ್ತಿವೆ.
ಆರಂಭದಿಂದಲೂ ರೈತರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಟಿಎಂಎಸ್‌ನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಹವಣಿಸುತ್ತಿರುವ ರಾಜಕೀಯ ಶಕ್ತಿಗಳು ರೈತರ ಹಿತವನ್ನೂ ಲೆಕ್ಕಿಸದೆ ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬುದನ್ನು ಕಾದು ನೋಡುವುದಷ್ಟೇ ಸದಸ್ಯರಿಗಿರುವ ದಾರಿ!