ಸ್ಕಾಲರ್‌ಶಿಪ್ ಹೆಸರಲ್ಲಿ ದೋಖಾ; ಗದುಗಿನಲ್ಲಿ ಐವರ ಬಂಧನ
ಗದಗ: ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ಐವರನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (Scholarship) ದೊರಕಿಸುವುದಾಗಿ ನಂಬಿಸಿ ಅವರ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಬಾಲಕರ ವಸತಿ ನಿಲಯಗಳಲ್ಲಿ ವಾಸವಾಗಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಗೆ ವಿದ್ಯಾರ್ಥಿವೇತನ ಪಡೆಯಲು ಸಹಾಯ ಮಾಡುವುದಾಗಿ ಹೇಳಿ ನಂಬಿಕೆ ಗಳಿಸಿದ್ದರು. ಬಳಿಕ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ಪ್ರೇರೇಪಿಸಿದ್ದರು.
ಯೋಜನೆ ನಿಜವಾದಂತೆ ಕಾಣಲು ಪ್ರತಿ ಖಾತೆಗೆ ಆರಂಭಿಕವಾಗಿ 2 ಸಾವಿರ ರೂ ಠೇವಣಿ ಇಡಲಾಗಿತ್ತು. ಖಾತೆಗಳು ತೆರೆಯುತ್ತಿದ್ದಂತೆಯೇ ಪಾಸ್‌ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಂಡು, ಅವುಗಳನ್ನು ಸೈಬರ್ ವಂಚನೆಗೆ ಬಳಸುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 11ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳು ಗೋವಾಕ್ಕೆ ತೆರಳಿ ಈ ಬ್ಯಾಂಕ್ ಕಿಟ್‌ಗಳನ್ನು ಇತರರಿಗೆ ಹಸ್ತಾಂತರಿಸಲು ಹೊರಟಿದ್ದ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ವಿಜಯನಗರ ಜಿಲ್ಲೆಯ ವಕ್ದೋತ್ ವಕೀಲ್ (24), ರಾಜ (23), ಜಾರ್ಖಂಡ್ ಮೂಲದ ಜೀಶಾನ್ ಅಂಸಾರಿ ಅಲಿಯಾಸ್ ಜೀಸು (22), ಛತ್ತೀಸ್‌ಗಢ ಮೂಲದ ಡಿಜೆ ಕಲಾವಿದ ಆಕಾಶ್ (32) ಹಾಗೂ ವಿದ್ಯಾರ್ಥಿ ಸಾಹಿಲ್ (22) ಸೇರಿದ್ದಾರೆ.
ಪೊಲೀಸರು 11 ಮೊಬೈಲ್ ಫೋನ್‌ಗಳು ಹಾಗೂ 8 ಬ್ಯಾಂಕ್ ಕಿಟ್‌ಗಳನ್ನು (ಪಾಸ್‌ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳು) ವಶಪಡಿಸಿಕೊಂಡಿದ್ದಾರೆ. ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇನ್ನೂ ಅನೇಕ ಖಾತೆಗಳನ್ನು ಇದೇ ರೀತಿಯಲ್ಲಿ ತೆರೆಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಜಾಲಕ್ಕೆ ಸಂಬಂಧಿಸಿದ ಇನ್ನೂ ಮೂವರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಇಂತಹ ವಂಚಕರ ಬಗ್ಗೆ ಎಚ್ಚರವಿರಲಿ. ಮೋಸವೆಸಗುವುದನ್ನೇ ದಂಧೆಯಾಗಿಸಿಕೊಂಡಿರುವ ಇಂತಹ ವಂಚಕರ ಬಲೆಗೆ ಸಿಲುಕದಿರಿ.