ಆಡಿ ಕಾರ್ಗೆ ಅಪ್ರಾಪ್ತ ಚಾಲಕ; ಉಸಿರು ನಿಲ್ಲಿಸಿದ ಬಿಜೆಪಿ ಮುಖಂಡನ ಪುತ್ರ
ಹುಬ್ಬಳ್ಳಿ: ರೀಲ್ಸ್ ವಿಡಿಯೋ ಚಿತ್ರೀಕರಣದ ವೇಳೆ ನಡೆದ ಅಜಾಗರೂಕ ಸ್ಪಂಟ್ ಒಂದು ಅಮಾಯಕ ಜೀವವನ್ನು ಕಸಿದುಕೊಂಡ ದುರಂತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಮೀಷ್ ಸಂಗಳದ ಮೃ*ತಪಟ್ಟ ಬಾಲಕನಾಗಿದ್ದಾನೆ.
ಮೈಸೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ನಮೀಷ್, ಯುಗಾದಿ ರಜೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತನ್ನ ಮನೆಗೆ ಬಂದಿದ್ದ. ಈ ಮಧ್ಯೆ ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಚಿತ್ರೀಕರಣಕ್ಕಾಗಿ ಹೊರಟಿದ್ದ.
ಉಣಕಲ್–ತಾರಿಹಾಳ ಮಾರ್ಗದ ಮಹಾಲಕ್ಷ್ಮಿ ಲೇಔಟ್ನಲ್ಲಿ ಈ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಅಪ್ರಾಪ್ತ ಬಾಲಕನೊಬ್ಬ ಆಡಿ ಕಾರನ್ನು ಅಪಾಯಕಾರಿ ವೇಗದಲ್ಲಿ, ಅಂದಾಜು ಸುಮಾರು 150 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ.
ಅದೇ ಸಮಯದಲ್ಲಿ, ಎದುರಿನಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬರುತ್ತಿದ್ದ ನಮೀಷ್ನ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಕಾರಿನ ವೇಗ ಹೆಚ್ಚಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ಸ್ಕೂಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ನಮೀಷ್ ಸುಮಾರು 10 ಅಡಿ ದೂರಕ್ಕೆ ಎಸೆಯಲ್ಪಟ್ಟು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ಆಗಮಿಸಿ, ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತನನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ಆದರೆ, ಆತ “ನಾನು ಕಾರನ್ನು ನಿಲ್ಲಿಸಿದ್ದೆ, ಅವನೇ ವೇಗವಾಗಿ ಬಂದು ಗುದ್ದಿದ್ದಾನೆ” ಎಂದು ತಪ್ಪನ್ನು ತಳ್ಳಿಹಾಕಲು ಯತ್ನಿಸಿದ್ದಾನೆ. ಆಡಿ ಕಾರು ತನ್ನ ತಂದೆಯದ್ದೇ ಎಂದು ಕೂಡ ಆತ ಹೇಳಿದ್ದಾನೆ ಎನ್ನಲಾಗಿದೆ.
ಈ ದುರ್ಘಟನೆಯಿಂದ ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ನಿರ್ಲಕ್ಷ್ಯ ಹಾಗೂ ಅಪಾಯಕಾರಿ ರೀಲ್ಸ್ ಸಂಸ್ಕೃತಿ ಮತ್ತೊಮ್ಮೆ ತನ್ನ ಭೀಕರ ಪರಿಣಾಮ ತೋರಿಸಿದೆ.