ಸಂಪಾದಕೀಯ
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ಒಂದು ಆಂತರಿಕ ಅರ್ಥವಿದೆ. ಆಚರಣೆಗಳ ಹಿಂದೆ ಜೀವನ ಮೌಲ್ಯಗಳನ್ನು ನೆನಪಿಸುವ ಸಂದೇಶ ಅಡಗಿದೆ. ಅಂತಹ ಮಹತ್ವದ ದಿನಗಳಲ್ಲಿ ಅಕ್ಷಯ ತೃತೀಯಾ ಕೂಡ ಒಂದು. ‘ಅಕ್ಷಯ’ ಎಂದರೆ ಕ್ಷಯವಾಗದ್ದು, ಎಂದೆಂದಿಗೂ ಉಳಿಯುವುದು.
ಈ ದಿನದಲ್ಲಿ ಬಂಗಾರ, ಬೆಳ್ಳಿ, ಆಭರಣ, ಜಮೀನು ಅಥವಾ ಹೊಸ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಜನಮಾನಸದಲ್ಲಿ ಗಾಢವಾಗಿದೆ. ಅದಕ್ಕಾಗಿ ಅಂಗಡಿಗಳ ಮುಂದೆ ಜನಸಂದಣಿ, ಜಾಹೀರಾತುಗಳ ಆರ್ಭಟ, ಖರೀದಿ ಸಂಭ್ರಮ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ.
ಆದರೆ ಒಂದು ಪ್ರಶ್ನೆಯನ್ನು ನಮ್ಮಲ್ಲೇ ನಾವು ಕೇಳಿಕೊಳ್ಳಲೇಬೇಕು. ಅಕ್ಷಯವಾಗಬೇಕಾದದ್ದು ಕೇವಲ ಬಂಗಾರವೇ? ಬ್ಯಾಂಕ್ ಖಾತೆಯಲ್ಲಿನ ಹಣವೇ? ಮನೆಯಲ್ಲಿ ಸೇರುವ ಆಸ್ತಿಯೇ? ಇವು ಜೀವನಕ್ಕೆ ಅಗತ್ಯವೇ ಸರಿ, ಆದರೆ ಇವುಗಳೇ ಸಂಪೂರ್ಣ ಜೀವನವಲ್ಲ.
ಹಣದಿಂದ ಸೌಲಭ್ಯಗಳನ್ನು ಪಡೆಯಬಹುದು, ಆದರೆ ಶಾಂತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆಭರಣಗಳಿಂದ ದೇಹ ಅಲಂಕರಿಸಬಹುದು, ಆದರೆ ವ್ಯಕ್ತಿತ್ವವನ್ನು ಅಲ್ಲ. ಆಸ್ತಿ ಹೆಚ್ಚಿದರೆ ಮನೆ ದೊಡ್ಡದಾಗಬಹುದು, ಆದರೆ ಮನಸ್ಸು ದೊಡ್ಡದಾಗುವುದಿಲ್ಲ.
ಇಂದಿನ ಸಮಾಜಕ್ಕೆ ಹೆಚ್ಚು ಅಗತ್ಯವಿರುವುದು ಸದ್ವಿಚಾರಗಳ ಅಕ್ಷಯ ಸಂಪತ್ತು. ಸತ್ಯ, ಪ್ರಾಮಾಣಿಕತೆ, ಕರುಣೆ, ಪರೋಪಕಾರ, ಸಹಾನುಭೂತಿ, ಪರಸ್ಪರ ಗೌರವ. ಇವು ಕ್ಷಯವಾಗದ ಮೌಲ್ಯಗಳಾಗಬೇಕು. ಇವುಗಳಿಲ್ಲದ ಸಮಾಜದಲ್ಲಿ ಎಷ್ಟೇ ಹಣ ಹರಿದಾಡಿದರೂ ನೆಮ್ಮದಿ ನೆಲೆಸದು. ತಂತ್ರಜ್ಞಾನ ಬೆಳೆಯಬಹುದು, ಕಟ್ಟಡಗಳು ಎತ್ತರವಾಗಬಹುದು, ಆದರೆ ಮಾನವೀಯತೆ ಕುಗ್ಗಿದರೆ ಅಭಿವೃದ್ಧಿಗೆ ಅರ್ಥವೇ ಉಳಿಯದು.
ಅಕ್ಷಯ ತೃತೀಯಾ ದಿನ ನಾವು ಚಿನ್ನ ಖರೀದಿಸುವ ಮೊದಲು ಚಿಂತನೆ ಖರೀದಿಸಬೇಕು. ನಮ್ಮೊಳಗಿನ ದುರಾಶೆ ಕಡಿಮೆಯಾಗಲಿ, ಸ್ವಾರ್ಥ ಕ್ಷಯವಾಗಲಿ, ನಿಸ್ವಾರ್ಥತೆ ಅಕ್ಷಯವಾಗಲಿ ಎಂದು ಪ್ರಾರ್ಥಿಸಬೇಕು. ಇತರರಿಗೆ ನೆರವಾಗುವ ಮನಸ್ಸು ಹೆಚ್ಚಬೇಕು.
ನಮ್ಮ ಮಾತಿನಿಂದ ಯಾರಿಗೂ ನೋವಾಗದಿರಲಿ, ನಮ್ಮ ನಡೆ ಸಮಾಜಕ್ಕೆ ಮಾದರಿಯಾಗಲಿ, ನಮ್ಮ ಯಶಸ್ಸಿನಲ್ಲಿ ಇತರರ ಪಾಲೂ ಇರಲಿ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು.
ಇಂದು ಮನೆಮನೆಗಳಲ್ಲಿ ಲಕ್ಷಾಂತರ ರೂಪಾಯಿಗಳ ಆಭರಣ ಖರೀದಿಯಾಗಬಹುದು. ಆದರೆ ಅದೇ ಮನೆಗಳಲ್ಲಿ ಪ್ರೀತಿ, ವಿಶ್ವಾಸ, ಹಿರಿಯರಿಗೆ ಗೌರವ, ಮಕ್ಕಳಿಗೆ ಮೌಲ್ಯ ಶಿಕ್ಷಣ, ನೆರೆಹೊರೆಯವರೊಂದಿಗೆ ಸ್ನೇಹ ಇವುಗಳೂ ಅಕ್ಷಯವಾಗಬೇಕಲ್ಲವೇ?
ಹಸಿದವನಿಗೆ ಅನ್ನ, ಬಡವನಿಗೆ ನೆರವು, ಕಷ್ಟದಲ್ಲಿರುವವನಿಗೆ ಧೈರ್ಯ, ಏಕಾಂಗಿಗೆ ಸಾಂತ್ವನ ಇವುಗಳೇ ನಿಜವಾದ ಪುಣ್ಯದ ಹೂಡಿಕೆಗಳು.
ಅಕ್ಷಯ ತೃತೀಯಾ ಎಂದರೆ ಕೇವಲ ಖರೀದಿ ದಿನವಲ್ಲ. ಅದು ಆತ್ಮಪರಿಶೀಲನೆಯ ದಿನವೂ ಹೌದು. ನಾವು ಏನು ಸಂಪಾದಿಸಿದ್ದೇವೆ ಎಂಬುದಕ್ಕಿಂತ, ಏನು ಹಂಚಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳುವ ಕ್ಷಣವೂ ಹೌದು. ಸಮಾಜದಲ್ಲಿ ದ್ವೇಷ ಕ್ಷಯವಾಗಿ, ಪ್ರೀತಿ ಅಕ್ಷಯವಾಗಲಿ. ಅಹಂಕಾರ ಕ್ಷಯವಾಗಿ, ವಿನಯ ಅಕ್ಷಯವಾಗಲಿ. ಅನ್ಯಾಯ ಕ್ಷಯವಾಗಿ, ನ್ಯಾಯ ಅಕ್ಷಯವಾಗಲಿ.
ಹೀಗಾದಾಗ ಮಾತ್ರ ಅಕ್ಷಯ ತೃತೀಯೆಯ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಬಂಗಾರ ಕೈಯಲ್ಲಿ ಮಿನುಗುವುದಕ್ಕಿಂತ, ಗುಣಗಳು ಹೃದಯದಲ್ಲಿ ಮಿನುಗಿದರೆ ಬದುಕೇ ಧನ್ಯವಾಗುತ್ತದೆ. ಅಂಥದೊಂದು ಸಾರ್ಥಕ ಬದುಕು ಎಲ್ಲರದಾಗಲಿ. ನಮ್ಮೆಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ, ಬೆಂಬಲಿಸುತ್ತಿರುವ ಎಲ್ಲ ಹಿತೈಷಿಗಳಿಗೂ ಅಕ್ಷಯ ತೃತೀಯಾ ಶುಭ ಹಾರೈಕೆಗಳು.