ಮೈಸೂರು : ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಬೇಸಾಯ ಜಮೀನಿಗೆ ತೊಂದರೆ ನೀಡಲಾಗುತ್ತಿದೆ ಎಂದು ಜಮೀನಿನ ಮಾಲೀಕರಾದ ಮಧು ಆರೋಪಿಸಿದರು.
ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರನಹಳ್ಳಿ ಹೋಬಳಿ ಬೈಲುಕುಪ್ಪೆ ಸರ್ವೇ ನಂ. 32/1ರಲ್ಲಿ ತಮ್ಮ ಹೆಸರಿನಲ್ಲಿ 4 ಎಕರೆ 27 ಗುಂಟೆ ಜಮೀನು ಇದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಮ್ಮ ಬಳಿ ಇರುವುದಾಗಿ ತಿಳಿಸಿದರು.
ಆದರೆ ಸಮೀಪದ ಸರ್ವೇ ನಂ. 31ರಲ್ಲಿರುವ ಸುಶೀಲಮ್ಮ ಅವರು ತಮ್ಮ ಜಮೀನಿನಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು, ಅವರ ಜಮೀನು ಮತ್ತು ನಮ್ಮ ಜಮೀನಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಅಲ್ಲದೆ, ಅವರು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿಯೇ ಬೇಸಾಯ ಮಾಡುತ್ತಿರುವುದಾಗಿ ಆರೋಪಿಸಿ, ಈ ಬಗ್ಗೆ ಅರಣ್ಯ ಇಲಾಖೆ ಈಗಾಗಲೇ ಸರ್ವೇ ನಡೆಸಿರುವುದಾಗಿ ತಿಳಿಸಿದರು.
ಈ ವಿಷಯವನ್ನು ಪ್ರಶ್ನಿಸಿದಾಗ ಸುಳ್ಳು ಆರೋಪಗಳನ್ನು ಮಾಡುತ್ತಾ, ದಲಿತ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೀಲಾ ಡಿಸೋಜಾ, ನಾವು ಸುಮಾರು ನೂರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿದ್ದು, ಎಲ್ಲ ಸಮುದಾಯದವರೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿ ಭೇದಭಾವ ಇಲ್ಲ. ಆದರೆ ಕೆಲವರು ಜಾತಿ ವಿಚಾರವನ್ನು ಮುಂದಿಟ್ಟು ದಬ್ಬಾಳಿಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.ಇದಲ್ಲದೆ, ಹಲವು ವರ್ಷಗಳಿಂದ ಸಂಚಾರಕ್ಕಾಗಿ ಬಳಸುತ್ತಿರುವ ಸರ್ವೇ ನಂಬರಿನ ಸರ್ಕಾರಿ ರಸ್ತೆಯನ್ನು ನಿರ್ಬಂಧವಿಲ್ಲದೆ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಾಲ, ಮಹೇಶ್, ಪ್ರದೀಪ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.