ಯಲ್ಲಾಪುರ: ಯಲ್ಲಾಪುರ -ಶಿರಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದರಿಂದ ರಕ್ತ ಸುರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಂಚಿಕೇರಿ ಬಳಿ ಆ ವಾಹನವನ್ನು ಅಡ್ಡಗಟ್ಟಿದ್ದು, ವಾಹನದಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಸಾರ್ವಜನಿಕರು ಆ ಗಾಡಿಯನ್ನು ಮಂಚಿಕೇರಿ ಪೊಲೀಸ್ ಠಾಣೆಗೆ ಕರೆದೊಯ್ದಾಗ ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ ಅವರು ದಾಖಲೆಗಳ ತಪಾಸಣೆ ಮಾಡಿದರು. ಈ ವೇಳೆ ಗೋವುಗಳನ್ನು ಹುಲೆಕಲ್ ಬಳಿಯ ಗೋಶಾಲೆಗೆ ಒಯ್ಯುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿದರು. ಅಲ್ಲಿದ್ದ ಫಕೀರಪ್ಪ ಭೋವಿವಡ್ಡರ, ನಿತಿನ್ ನಾಯ್ಕ, ಪವನ ನಾಯ್ಕ, ಮುನ್ನ ಸುಗಮ, ಪ್ರಥಮ್ ನಾಯ್ಕ ಅವರು ವಾಹನದಲ್ಲಿದ್ದವರ ವಿವರ ವಿಚಾರಿಸಿದರು.
ಅಮಿತ್ ಗಬ್ಬುರ್, ನಾಗರಾಜ ಭೋವಿವಡ್ಡರ , ರಿಹಾನ್ ಶೇಕ್, ನಿತಿನ್ ನಾಯ್ಕ, ರಾಘವೇಂದ್ರ ಭಟ್ಟ, ಗಣಪತಿ ಹಾಗೂ ಜಾಫರ್ ಸೇರಿ ಆ ಜಾನುವಾರುಗಳು ಗೋಶಾಲೆಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡರು. ಹಿಂಸಾತ್ಮಕ ರೀತಿಯಲ್ಲಿ ಹಸು ಸಾಗಾಟ ಮಾಡದಂತೆ ಎಲ್ಲರೂ ಸೇರಿ ವಾಹನದವರಿಗೆ ಸೂಚನೆ ನೀಡಿದರು. ನಂತರ ಜಾನುವಾರುಗಳಿಗೆ ಆಹಾರ-ನೀರು ಒದಗಿಸಿ ಗೋಶಾಲೆಗೆ ಕಳುಹಿಸಲಾಯಿತು.